ದೆಹಲಿ: ಐಪಿಎಲ್ 2025 ರ ಮೆಗಾ ಹರಾಜು ಪ್ರಕ್ರಿಯೆಗೆ ಮುನ್ನ ಹಲವು ಆಟಗಾರರು ಯಾವೆಲ್ಲಾ ತಂಡಗಳು ಸೇರಿಕೊಳ್ಳಬಹುದು ಎಂಬ ಬಗ್ಗೆ ವಿಶ್ಲೇಷಣೆ ನಡೆಯುತ್ತಿದೆ. ಇದೀಗ ರಿಷಬ್ ಪಂತ್ ಈ ಬಾರಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ತೊರೆಯುವುದು ಬಹುತೇಕ ಖಚಿತ ಎಂದು ಹೇಳಲಾಗುತ್ತಿದೆ.
ರಿಷಬ್ ಪಂತ್ 2021 ರಿಂದ ಡೆಲ್ಲಿ ತಂಡದ ನಾಯಕರಾಗಿದ್ದಾರೆ. ಆದರೆ ಇದುವರೆಗೆ ಅವರ ನಾಯಕತ್ವದಲ್ಲಿ ತಂಡ ಹೇಳಿಕೊಳ್ಳುವ ಪ್ರದರ್ಶನ ನೀಡಿಲ್ಲ. ಹೀಗಾಗಿ ಅವರನ್ನು ಈ ಬಾರಿ ರಿಲೀಸ್ ಮಾಡಲು ಡೆಲ್ಲಿ ಫ್ರಾಂಚೈಸಿ ಮುಂದಾಗಿದೆ. ಹೀಗಾಗಿ ಮುಂದೆ ಯಾವ ತಂಡ ಕೂಡಿಕೊಳ್ಳಬಹುದು ಎಂಬ ಕುತೂಹಲ ಎಲ್ಲರಲ್ಲಿದೆ.
ಮೂಲಗಳ ಪ್ರಕಾರ ರಿಷಬ್ ಪಂತ್ ರನ್ನು ಈಗಾಗಲೇ ಚೆನ್ನೈ ಸೂಪರ್ ಕಿಂಗ್ಸ್ ತಂಡ ಖರೀದಿಗೆ ಮಾತುಕತೆ ನಡೆಸಿದೆಯಂತೆ. ರಿಷಬ್ ಕೂಡಾ ಚೆನ್ನೈ ತಂಡ ಸೇರಿಕೊಳ್ಳಲು ಒಪ್ಪಿದ್ದಾರೆ ಎನ್ನಲಾಗಿದೆ. ಹೇಗಿದ್ದರೂ ಧೋನಿ ಮುಂದಿನ ಆವೃತ್ತಿಯಲ್ಲಿ ವಿಕೆಟ್ ಕೀಪರ್ ಆಗಿ ಕಣಕ್ಕಿಳಿಯುವುದು ಅನುಮಾನ. ಹೀಗಾಗಿ ಒಬ್ಬ ಪ್ರಬಲ ವಿಕೆಟ್ ಕೀಪರ್ ಬ್ಯಾಟಿಗನಿಗಾಗಿ ಚೆನ್ನೈ ಹುಡುಕಾಟ ನಡೆಸುತ್ತಿದೆ.
ಹೀಗಾಗಿ ಧೋನಿಗೆ ಆಪ್ತರಾಗಿರುವ ರಿಷಬ್ ಗೇ ಗಾಳ ಹಾಕುತ್ತಿದೆ ಎನ್ನಲಾಗಿದೆ. ಸದ್ಯಕ್ಕೆ ಚೆನ್ನೈ ತಂಡಕ್ಕೆ ಋತುರಾಜ್ ಗಾಯಕ್ ವಾಡ್ ನಾಯಕರಾಗಿದ್ದಾರೆ. ರಿಷಬ್ ಇದುವರೆಗೆ ಚೆನ್ನೈ ನಾಯಕತ್ವಕ್ಕೆ ಬೇಡಿಕೆಯಿಟ್ಟಿಲ್ಲ. ಏನೇ ಆದರೂ ಇದೀಗ ಡೆಲ್ಲಿ ಫ್ರಾಂಚೈಸಿ ನಿರ್ಧಾರದ ಮೇಲೆ ಎಲ್ಲವೂ ನಿಂತಿದೆ.