ದುಬೈ: ಐಪಿಎಲ್ ಮಿನಿ ಹರಾಜು ಪ್ರಕ್ರಿಯೆಯಲ್ಲಿ ಆಸ್ಟ್ರೇಲಿಯಾ ಆಟಗಾರರಿಗೆ ಭಾರೀ ಬೇಡಿಕೆ ಬಂದಿದೆ. ವೇಗಿ ಮಿಚೆಲ್ ಸ್ಟಾರ್ಕ್ ಐಪಿಎಲ್ ಇತಿಹಾಸದಲ್ಲೇ ದಾಖಲೆಯ ಮೊತ್ತಕ್ಕೆ ಬಿಕರಿಯಾಗಿದ್ದಾರೆ.
ಆಸ್ಟ್ರೇಲಿಯಾ ಮೂಲದ ವೇಗಿ ಮಿಚೆಲ್ ಸ್ಟಾರ್ಕ್ ರನ್ನು ಕೋಲ್ಕೊತ್ತಾ ನೈಟ್ ರೈಡರ್ಸ್ ದಾಖಲೆಯ 24.5 ಕೋಟಿ ರೂ. ಗೆ ಖರೀದಿ ಮಾಡಿದೆ! ಇದು ಐಪಿಎಲ್ ಇತಿಹಾಸದಲ್ಲೇ ಗರಿಷ್ಠ ಸಂಭಾವನೆಯಾಗಿದೆ.
ಇನ್ನು, ಆಸ್ಟ್ರೇಲಿಯಾಕ್ಕೆ ಏಕದಿನ ವಿಶ್ವಕಪ್ ಗೆಲುವು ತಂದಿತ್ತು ನಾಯಕ ಪ್ಯಾಟ್ ಕ್ಯುಮಿನ್ಸ್ ರನ್ನು ಸನ್ ರೈಸರ್ಸ್ ಹೈದರಾಬಾದ್ ಬರೋಬ್ಬರಿ 20.50 ಕೋಟಿ ರೂ. ನೀಡಿ ಖರೀದಿ ಮಾಡಿದೆ. ಕ್ಯುಮಿನ್ಸ್ ಮೂಲಬೆಲೆ 2 ಕೋಟಿ ರೂ.ಗಳಷ್ಟಿತ್ತು.
ಇವರಲ್ಲದೆ ವಿಶ್ವಕಪ್ ಫೈನಲ್ ನಲ್ಲಿ ಶತಕ ಸಿಡಿಸಿದ್ದ ಟ್ರಾವಿಸ್ ಹೆಡ್ ಗೆ ಎರಡಂಕಿ ಮೊತ್ತ ನಿರೀಕ್ಷಿಸಲಾಗಿತ್ತು. ಆದರೆ ಅವರು 6.8 ಕೋಟಿ ರೂ.ಗೆ ಹೈದರಾಬಾದ್ ಗೆ ಸೇಲ್ ಆಗಿದ್ದಾರೆ. ಆದರೆ ಭಾರತೀಯ ಮೂಲದ ನ್ಯೂಜಿಲೆಂಡ್ ಆಟಗಾರ ರಚಿನ್ ರವೀಂದ್ರ ಈ ಬಾರೀ ಭಾರೀ ಮೊತ್ತ ಪಡೆಯಬಹುದು ಎಂಬ ನಿರೀಕ್ಷೆ ಸುಳ್ಳಾಗಿದೆ. ಅವರನ್ನು ಸಿಎಸ್ ಕೆ ಕೇವಲ 1.80 ಕೋಟಿ ರೂ.ಗೆ ಖರೀದಿ ಮಾಡಿದೆ.
ಇಂಗ್ಲೆಂಡ್ ನ ಹ್ಯಾರಿ ಬ್ರೂಕ್ ರನ್ನು 13.25 ಕೋಟಿ ರೂ. ತೆತ್ತು ಹೈದರಬಾದ್ ಖರೀದಿ ಮಾಡಿದೆ. ವಿಂಡೀಸ್ ನ ರೊವ್ ಮ್ಯಾನ್ ಪೊವೆಲ್ 7.40 ಕೋಟಿ ರೂ.ಗೆ ರಾಜಸ್ಥಾನ್ ಪಾಲಾದರು. ವಿಶೇಷವೆಂದರೆ ಕಳೆದ ಬಾರಿ ಅನ್ ಸೋಲ್ಡ್ ಆಗಿದ್ದ ನ್ಯೂಜಿಲೆಂಡ್ ನ ಡೆರಿಲ್ ಮಿಚೆಲ್ 14 ಕೋಟಿ ರೂ.ಗೆ ಚೆನ್ನೈ ಪಾಲಾಗಿದ್ದಾರೆ.