ಮುಂಬೈ: ಮುಂದಿನ ವರ್ಷ ನಡೆಯಲಿರುವ ಐಪಿಎಲ್ ಮೆಗಾ ಹರಾಜು ಪ್ರಕ್ರಿಯೆಯಲ್ಲಿ ರೋಹಿತ್ ಶರ್ಮಾ ಏನಾದರೂ ಹರಾಜಿಗೆ ಬಂದರೆ ಪ್ರಾಣ ಪಣಕ್ಕಿಟ್ಟು ಅವರನ್ನು ಖರೀದಿ ಮಾಡುವೆ ಎಂದು ಪಂಜಾಬ್ ಕಿಂಗ್ಸ್ ಮಾಲಕಿ ಪ್ರೀತಿ ಝಿಂಟಾ ನೀಡಿದ್ದಾರೆ ಎನ್ನಲಾದ ಹೇಳಿಕೆಯೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.
ಈ ಬಾರಿ ರೋಹಿತ್ ಶರ್ಮಾರನ್ನು ಮುಂಬೈ ಇಂಡಿಯನ್ಸ್ ನಾಯಕತ್ವದಿಂದ ಕಿತ್ತು ಹಾಕಿದ ಬಳಿಕ ಒಬ್ಬರಾದ ಮೇಲೊಬ್ಬರು ಅವರು ನಮ್ಮ ತಂಡಕ್ಕೆ ಬರಲಿ ಎಂದು ಹೇಳಿಕೆ ನೀಡುತ್ತಿದ್ದಾರೆ. ಈ ಮೊದಲು ಡೆಲ್ಲಿ ಕ್ಯಾಪಿಟಲ್ಸ್, ಅದಾದ ಬಳಿಕ ಲಕ್ನೋ ಸೂಪರ್ ಜೈಂಟ್ಸ್ ರೋಹಿತ್ ರನ್ನು ಕೊಳ್ಳಲು ಆಸಕ್ತಿ ಹೊಂದಿದ್ದಾರೆ ಎಂದು ವರದಿಯಾಗಿತ್ತು.
ಇದರ ಬೆನ್ನಲ್ಲೇ ಸಿಎಸ್ ಕೆ ಮಾಜಿ ಆಟಗಾರ ಅಂಬಟಿ ರಾಯುಡು ಧೋನಿ ನಿವೃತ್ತಿ ಬಳಿಕ ರೋಹಿತ್ ಶರ್ಮಾ ಸಿಎಸ್ ಕೆ ಬರಬಹುದು. ಅವರು ಹಳದಿ ಜೆರ್ಸಿಯೊಂದಿಗೆ ನಿವೃತ್ತಿಯಾಗಬಹುದು ಎಂದು ಹೇಳಿ ಸಂಚಲನ ಸೃಷ್ಟಿಸಿದ್ದರು.
ರೋಹಿತ್ ಶರ್ಮಾ ಇದೀಗ ಮುಂಬೈ ತಂಡದಲ್ಲೇ ಇದ್ದಾರೆ. ಆದರೆ ಮುಂದಿನ ವರ್ಷ ಮೆಗಾ ಹರಾಜು ಪ್ರಕ್ರಿಯೆಯಲ್ಲಿ ಮುಂಬೈ ಅವರನ್ನು ಬಿಟ್ಟುಕೊಡಲೂ ಬಹುದು. ಹಾಗಿದ್ದರೆ ಹಿಟ್ ಮ್ಯಾನ್ ಬೇರೆ ತಂಡದ ಪಾಲಾಗಬಹುದು. ಯಾಕೆಂದರೆ ಬಿಗ್ ಹಿಟ್ಟರ್ ಬ್ಯಾಟಿಗ ರೋಹಿತ್ ಗೆ 36 ವರ್ಷ ವಯಸ್ಸಾದರೂ ಬೇಡಿಕೆ ಕಡಿಮೆಯಾಗಿಲ್ಲ.
ಇದರ ಬೆನ್ನಲ್ಲೇ ಪಂಜಾಬ್ ತಂಡದ ಮಾಲಕಿ ಪ್ರೀತಿ ಝಿಂಟಾ, ಮುಂದಿನ ವರ್ಷ ಹಿಟ್ ಮ್ಯಾನ್ ರೋಹಿತ್ ಶರ್ಮಾ ಹರಾಜಿಗೆ ಬಂದರೆ ನನ್ನ ಪ್ರಾಣ ಪಣಕ್ಕಿಟ್ಟಾದರೂ ಅವರನ್ನು ಖರೀದಿ ಮಾಡುವೆ. ನಮಗೆ ಒಬ್ಬ ಉತ್ತಮ ನಾಯಕನ ಕೊರತೆಯಿದೆ. ಅದನ್ನು ರೋಹಿತ್ ನೀಗಿಸಬಹುದು ಎಂದಿದ್ದಾರೆ ಎಂಬ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.
ಆದರೆ ಇದೀಗ ಪಂಜಾಬ್ ತಂಡದ ಮೂಲದಿಂದಲೇ ಇದಕ್ಕೆ ಸ್ಪಷ್ಟನೆ ಸಿಕ್ಕಿದೆ. ಪ್ರೀತಿ ಝಿಂಟಾ ಇಂತಹ ಯಾವುದೇ ಹೇಳಿಕೆಯನ್ನೂ ನೀಡಿಲ್ಲ. ಇದೆಲ್ಲಾ ಸುಳ್ಳು ಸುದ್ದಿ. ಪ್ರೀತಿ ಝಿಂಟಾ ಇಂತಹ ಯಾವುದೇ ಹೇಳಿಕೆಯನ್ನೂ ನೀಡಿಲ್ಲ ಎಂದು ಸ್ಪಷ್ಟನೆ ನೀಡಿದೆ. ಇದು ಯಾರೋ ರೋಹಿತ್ ಅಭಿಮಾನಿಗಳು ಹರಿಯಬಿಟ್ಟ ಸುಳ್ಳು ಸುದ್ದಿ ಎಂದು ತಿಳಿದುಬಂದಿದೆ.