ಬೆಂಗಳೂರು: ಐಪಿಎಲ್ 2024 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಮತ್ತೊಮ್ಮೆ ಸೋಲಾಗಿದೆ. ಹೈದರಾಬಾದ್ ವಿರುದ್ಧ 25 ರನ್ ಗಳಿಂದ ಸೋಲು ಕಂಡಿದೆ. ಹಾಗಿದ್ದರೂ ದಾಖಲೆಯ ಮೊತ್ತವನ್ನು ಅಂಜದ ಗಂಡಿನಂತೆ ಚೇಸ್ ಮಾಡಿದ ದಿನೇಶ್ ಕಾರ್ತಿಕ್ ಗೆ ಚಿನ್ನಸ್ವಾಮಿ ಪ್ರೇಕ್ಷಕರು ಎದ್ದು ನಿಂತು ಗೌರವ ಸಲ್ಲಿಸಿದ್ದಾರೆ.
ಮೊದಲು ಬ್ಯಾಟಿಂಗ್ ಮಾಡಿದ ಹೈದರಾಬಾದ್ 20 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 287 ರನ್ ಗಳಿಸಿತು. ಈ ಮೂಲಕ ಇತ್ತೀಚೆಗಷ್ಟೇ ಐಪಿಎಲ್ ನಲ್ಲಿ ಗರಿಷ್ಠ ಮೊತ್ತ ದಾಖಲಿಸಿದ ತನ್ನದೇ ದಾಖಲೆಯನ್ನು ಅಳಿಸಿ ಮತ್ತೊಂದು ದಾಖಲೆ ಮಾಡಿತು. ಹೈದರಾಬಾದ್ ಪರವಾಗಿ ಆರಂಭಿಕ ಟ್ರಾವಿಸ್ ಹೆಡ್ 39 ಎಸೆತಗಳಲ್ಲಿ ಶತಕ ಪೂರ್ತಿ ಮಾಡಿದರು. ಅಂತಿಮವಾಗಿ ಅವರು 41 ಎಸೆತ ಎದುರಿಸಿ 102 ರನ್ ಗಳಿಸಿ ಔಟಾದರು. ಅವರು 8 ಸಿಕ್ಸರ್ ಸಿಡಿಸಿದ್ದರು.
ಆದರೆ ಅವರು ಔಟಾದ ಬಳಿಕ ಹೆನ್ರಿಚ್ ಕ್ಲಾಸನ್ 31 ಎಸೆತಗಳಿಂದ 67 ರನ್ ಚಚ್ಚಿದರು. ಇದರಲ್ಲಿ 7 ಸಿಕ್ಸರ್ ಸೇರಿತ್ತು. ಹೈದರಾಬಾದ್ ಬ್ಯಾಟಿಂಗ್ ಧಮಾಕ ಇಷ್ಟಕ್ಕೇ ಮುಗಿಯಲಿಲ್ಲ. ಆಡನ್ ಮಾರ್ಕರಮ್ 17 ಎಸೆತಗಳಿಂದ 32, ಅಬ್ದುಲ್ ಸಮದ್ 10 ಎಸೆತಗಳಿಂದ 37 ರನ್ ಚಚ್ಚಿದರು. ಬಂದ ಬ್ಯಾಟಿಗರೆಲ್ಲಾ ಆರ್ ಸಿಬಿ ಬೌಲರ್ ಗಳನ್ನು ಮನಸೋ ಇಚ್ಛೆ ಚೆಂಡಾಡುತ್ತಿದ್ದರು.
ಈ ಮೊತ್ತ ಬೆನ್ನತ್ತಿದ ಆರ್ ಸಿಬಿ ಆರಂಭ ಉತ್ತಮವಾಗಿದ್ದರೂ 20 ಎಸೆತ ಎದುರಿಸಿ 42 ರನ್ ಗಳಿಸಿ ಕೊಹ್ಲಿ ಔಟಾಗುವುದರೊಂದಿಗೆ ತಂಡದ ಕುಸಿತ ಆರಂಭವಾಯಿತು. ಆದರೆ ನಾಯಕ ಫಾ ಡು ಪ್ಲೆಸಿಸ್ 28 ಎಸೆತಗಳಲ್ಲಿ 7 ಸಿಕ್ಸರ್ ಸಹಿತ 62 ರನ್ ಸಿಡಿಸಿ ಭರವಸೆ ಮೂಡಿಸಿದರು. ಆದರೆ ಅವರಿಗೆ ಮಧ‍್ಯಮ ಕ್ರಮಾಂಕದಲ್ಲಿ ತಕ್ಕಸಾಥ್ ಸಿಗಲಿಲ್ಲ.
ಆದರೆ ಕೆಳ ಕ್ರಮಾಂಕದಲ್ಲಿ ದಿನೇಶ್ ಕಾರ್ತಿಕ್ ಬಂದಾಗ ಪಂದ್ಯದ ಚಹರೆಯೇ ಬದಲಾಯಿತು. ಕೇವಲ 35 ಎಸೆತ ಎದುರಿಸಿದ ಡಿಕೆ 7 ಸಿಕ್ಸರ್ ಸಹಿತ 83 ರನ್ ಚಚ್ಚಿದರು. ಇನ್ನೇನು ಅವರು ಕೊನೆಯವರೆಗೂ ಇದ್ದಿದ್ದರೆ ಆರ್ ಸಿಬಿ ಯಶಸ್ವಿಯಾಗಿ ಗುರಿ ಬೆನ್ನತ್ತಿ ದಾಖಲೆ ಮಾಡುತ್ತಿತ್ತೇನೋ. ಆದರೆ ಔಟಾಗುವ ಮೂಲಕ ನಿರಾಸೆ ಅನುಭವಿಸಿದರು. ಕೊನೆಯಲ್ಲಿ ಅನೂಜ್ ರವತ್ 14 ಎಸೆತ ಎದುರಿಸಿ 25 ರನ್ ಗಳಿಸಿದರು.