ಲಂಡನ್: ವಿಶ್ವಕಪ್ ಕ್ರಿಕೆಟ್ 2019 ರಲ್ಲಿ ವಿಕೆಟ್ ಮೇಲ್ಗಡೆ ಬಳಸಲಾಗುತ್ತಿರುವ ಬೇಲ್ಸ್ ಬಗ್ಗೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಆಸ್ಟ್ರೇಲಿಯಾ ನಾಯಕ ಏರಾನ್ ಫಿಂಚ್ ತಕರಾರರು ತೆಗೆದಿದ್ದಾರೆ.
ಈ ವಿವಾದ ಇದೀಗ ದೊಡ್ಡ ಮಟ್ಟಕ್ಕೇರುವ ಲಕ್ಷಣ ಕಾಣುತ್ತಿದೆ. ವಿಶ್ವಕಪ್ ಪಂದ್ಯದಲ್ಲಿ ಬಳಸಲಾಗುತ್ತಿರುವ ಬೇಲ್ಸ್ ಬಾಲ್ ತಾಗಿದರೂ ಸುಲಭವಾಗಿ ನೆಲಕ್ಕೆ ಬೀಳುತ್ತಿಲ್ಲ. ಇದರಿಂದಾಗಿ ಫೀಲ್ಡಿಂಗ್ ಮಾಡುವ ತಂಡಕ್ಕೆ ಅನ್ಯಾಯವಾಗುತ್ತಿದೆ ಎಂದು ಉಭಯ ನಾಯಕರು ದೂರಿದ್ದಾರೆ.
ಮೊನ್ನೆ ಆಸ್ಟ್ರೇಲಿಯಾ ವಿರುದ್ಧ ನಡೆದ ಪಂದ್ಯದಲ್ಲಿ ಆಸೀಸ್ ಬ್ಯಾಟ್ಸ್ ಮನ್ ಡೇವಿಡ್ ವಾರ್ನರ್ ಗೆ ಜಸ್ಪ್ರೀತ್ ಬುಮ್ರಾ ಎಸೆದ ಬಾಲ್ ವಿಕೆಟ್ ಗೆ ತಗುಲಿದರೂ ಬೇಲ್ಸ್ ಬೀಳದ ಕಾರಣ ಔಟ್ ತೀರ್ಪು ನೀಡಿರಲಿಲ್ಲ.
ವೆಸ್ಟ್ ಇಂಡೀಸ್ ಮತ್ತು ಆಸ್ಟ್ರೇಲಿಯಾ ನಡುವಿನ ಪಂದ್ಯದಲ್ಲಿ ಕ್ರಿಸ್ ಗೇಲ್ ಇದೇ ರೀತಿ ಬಚಾವ್ ಆಗಿದ್ದರು. ಆಫ್ರಿಕಾದ ಕ್ವಿಂಟನ್ ಡಿ ಕಾಕ್ ಗೂ ಇದೇ ರೀತಿ ಜೀವದಾನ ಲಭಿಸಿತ್ತು. ಒಟ್ಟಾರೆಯಾಗಿ ಈ ರೀತಿ ಇದುವರೆಗೆ ಐದು ಬಾರಿಯಾಗಿದೆ. ಹೀಗಾಗಿ ಉಭಯ ನಾಯಕರು ಬೇಲ್ಸ್ ಬಗ್ಗೆ ತಮ್ಮ ದೂರು ಸಲ್ಲಿಸಿದ್ದಾರೆ.