ವಿಶಾಖಪಟ್ಟಣಂ: ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯುತ್ತಿರುವ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ಟೀಂ ಇಂಡಿಯಾ ಮೊದಲು ಬ್ಯಾಟಿಂಗ್ ಮಾಡುತ್ತಿದ್ದು ಇತ್ತೀಚೆಗಿನ ವರದಿ ಬಂದಾಗ 1 ವಿಕೆಟ್ ನಷ್ಟಕ್ಕೆ 89 ರನ್ ಗಳಿಸಿದೆ.
ಆರಂಭಿಕರಾಗಿ ಕಣಕ್ಕಿಳಿದ ನಾಯಕ ರೋಹಿತ್ ಶರ್ಮಾ ಮತ್ತು ಯಶಸ್ವಿ ಜೈಸ್ವಾಲ್ ಜೋಡಿ ಮೊದಲ ವಿಕೆಟ್ ಗೆ 40 ರನ್ ಕಲೆ ಹಾಕಿದರು. ಈ ವೇಳೆ ರೋಹಿತ್ ಶೊಯೇಬ್ ಬಾಶಿರ್ ಬೌಲಿಂಗ್ ನಲ್ಲಿ ಒಲಿ ಪಾಪ್ ಗೆ ಕ್ಯಾಚಿತ್ತು ನಿರ್ಗಮಿಸಿದರು. ಈ ವೇಳೆ ಅವರು 41 ಎಸೆತ ಎದುರಿಸಿ 14 ರನ್ ಗಳಿಸಿದ್ದರು. ಆ ಮೂಲಕ ಮತ್ತೊಮ್ಮೆ ರೋಹಿತ್ ಟೆಸ್ಟ್ ಪಂದ್ಯದಲ್ಲಿ ದೊಡ್ಡ ಇನಿಂಗ್ಸ್ ಆಡಲು ವಿಫಲರಾಗಿದ್ದಾರೆ. ಕಳೆದ ಪಂದ್ಯದಲ್ಲೂ ರೋಹಿತ್ ದ್ವಿತೀಯ ಇನಿಂಗ್ಸ್ ನಲ್ಲಿ ನಿಂತು ಆಡಲಿಲ್ಲ ಎಂದು ಟೀಕೆಗೊಳಗಾಗಿದ್ದರು. ಇದೀಗ ಮತ್ತೆ ಕಳಪೆ ಆಟವಾಡಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಆದರೆ ಇನ್ನೊಂದೆಡೆ ಉತ್ತಮ ಆಟವಾಡುತ್ತಿರುವ ಜೈಸ್ವಾಲ್ 87 ಎಸೆತಗಳಿಂದ 41 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಈ ಪೈಕಿ ಒಂದು ಸಿಕ್ಸರ್ ಮತ್ತು 5 ಬೌಂಡರಿ ಸೇರಿದೆ. ಕಳೆದ ಪಂದ್ಯದಲ್ಲಿ ವಿಫಲರಾಗಿ ಟೀಕೆಗೊಳಗಾಗಿದ್ದ ಶುಬ್ಮನ್ ಗಿಲ್ ಇದೀಗ 46 ಎಸೆತಗಳಿಂದ 34 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ.
ಟಾಸ್ ಗೆದ್ದ ಭಾರತ, ರಜತ್ ಪಟಿದಾರ್ ಡೆಬ್ಯೂಟ್
ಇದಕ್ಕೆ ಮೊದಲು ಇಂದು ಟಾಸ್ ಗೆದ್ದ ಭಾರತ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು. ಭಾರತದ ಪರ ಈ ಪಂದ್ಯದಲ್ಲಿ ಆರ್ ಸಿಬಿ ಪರ ಐಪಿಎಲ್ ಆಡುವ ಮಧ‍್ಯಪ್ರದೇಶ ಮೂಲದ 30 ವರ್ಷದ ರಜತ್ ಪಟಿದಾರ್ ಗೆ ಚೊಚ್ಚಲ ಪಂದ್ಯವಾಡುವ ಅವಕಾಶ ಸಿಕ್ಕಿತು. ಅವರ ಜೊತೆ ಜಡೇಜಾ ಬದಲಿಗೆ ಕುಲದೀಪ್ ಯಾದವ್ ಮತ್ತು ಮೊಹಮ್ಮದ್ ಸಿರಾಜ್ ಸ್ಥಾನದಲ್ಲಿ ಮುಕೇಶ್ ಕುಮಾರ್ ಅವಕಾಶ ಪಡೆದರು.