ಮುಂಬೈ: ಟೀಂ ಇಂಡಿಯಾ ಏಕದಿನ ನಾಯಕತ್ವದಿಂದ ವಿರಾಟ್ ಕೊಹ್ಲಿಯನ್ನು ಕೆಳಗಿಳಿಸಿದ್ದು ಯಾಕೆ ಎಂಬ ಪ್ರಶ್ನೆಗೆ ಸ್ವತಃ ಬಿಸಿಸಿಐ ಅಧ‍್ಯಕ್ಷ ಸೌರವ್ ಗಂಗೂಲಿ ಉತ್ತರ ನೀಡಿದ್ದಾರೆ.
ಕೊಹ್ಲಿಯನ್ನು ಪದಚ್ಯುತಗೊಳಿಸಿದ ಮೇಲೆ ಅವರ ಅಭಿಮಾನಿಗಳು ಗಂಗೂಲಿ ಈ ವಿಚಾರದಲ್ಲಿ ಮಧ‍್ಯಪ್ರವೇಶಿಸಬೇಕು ಎಂದು ಆಗ್ರಹಿಸಿದ್ದರು. ಐದು ವರ್ಷ ನಾಯಕರಾಗಿದ್ದವರಿಗೆ ಈ ರೀತಿ ಅವಮಾನ ಮಾಡಿದ್ದು ಸರಿಯಲ್ಲ ಎಂದಿದ್ದರು. ಇದರ ಬಗ್ಗೆ ಇದೀಗ ಗಂಗೂಲಿ ಬಾಯ್ಬಿಟ್ಟಿದ್ದಾರೆ.
ಕೊಹ್ಲಿ ಟಿ20 ನಾಯಕತ್ವದಿಂದ ಕೆಳಗಿಳಿಯುತ್ತೇನೆ ಎಂದಾಗ ಬೇಡ ಎಂದು ಮನವಿ ಮಾಡಿದ್ದೆವು. ಅವರು ಕೊನೆಗೆ ಕೇವಲ ಟಿ20 ನಾಯಕತ್ವ ತ್ಯಜಿಸಿ ಏಕದಿನ ನಾಯಕತ್ವದಲ್ಲಿ ಉಳಿದುಕೊಂಡರು. ಇದಾದ ಬಳಿಕ ಎರಡೂ ವೈಟ್ ಬಾಲ್ ಕ್ರಿಕೆಟ್ ಮಾದರಿಗೆ ಒಬ್ಬರೇ ನಾಯಕರಿದ್ದರೆ ಸೂಕ್ತ ಎಂದು ಆಯ್ಕೆ ಸಮಿತಿಯೇ ಅವರನ್ನು ಏಕದಿನ ನಾಯಕತ್ವದಿಂದ ಕೆಳಗಿಳಿಸಿತು. ಟೆಸ್ಟ್ ತಂಡಕ್ಕೆ ಅವರೇ ನಾಯಕರಾಗಿ ಮುಂದುವರಿಯಲಿದ್ದಾರೆ.