ನವದೆಹಲಿ: ದೆಹಲಿಯಲ್ಲಿ ವಾಯು ಮಾಲಿನ್ಯ ತಾರಕಕ್ಕೇರಿದ್ದು, ದೀಪಾವಳಿ ನಂತರ ಪರಿಸ್ಥಿತಿ ಇನ್ನಷ್ಟು ಉಲ್ಬಣಿಸಿದೆ. ಈ ನಡುವೆ ನವಂಬರ್ 3 ರಂದು ನಡೆಯಲಿರುವ ಮೊದಲ ಟಿ20 ಪಂದ್ಯಕ್ಕೆ ರಾಷ್ಟ್ರ ರಾಜಧಾನಿಯ ಕ್ರಿಕೆಟ್ ಮೈದಾನ ಸಜ್ಜಾಗಿದೆ.
ಈ ಪಂದ್ಯದಲ್ಲೂ ಕ್ರಿಕೆಟಿಗರಿಗೆ ವಾಯು ಮಾಲಿನ್ಯದ ನಡುವೆ ಆಡುವ ತಲೆನೋವು ಶುರುವಾಗಿದೆ. ಈಗಾಗಲೇ ಭಾರತಕ್ಕೆ ಬಂದಿಳಿದಿರುವ ಬಾಂಗ್ಲಾ ಕ್ರಿಕೆಟಿಗರು ಅಭ್ಯಾಸ ಆರಂಭಿಸಿದ್ದಾರೆ. ಆದರೆ ಮಾಸ್ಕ್ ಧರಿಸಿ ಅಭ್ಯಾಸ ನಡೆಸುವ ಪರಿಸ್ಥಿತಿ ಬಂದಿದೆ.
ಇನ್ನು, ಭಾರತೀಯ ಕ್ರಿಕೆಟಿಗರು ಹೊರಾಂಗಣದಲ್ಲಿ ಅಭ್ಯಾಸ ನಡೆಸದೇ ಇರಲು ತೀರ್ಮಾನಿಸಿದ್ದಾರೆ. ಉಸಿರಾಟ ಸಮಸ್ಯೆ ಕಾಡಬಹುದು ಎಂಬ ಭೀತಿಯಿಂದ ಒಳಾಂಗಣದಲ್ಲಿ ಅಭ್ಯಾಸ ನಡೆಸಲಿದ್ದಾರೆ. ಇಲ್ಲಿ ಇಂತಹ ಪರಿಸ್ಥಿತಿಯಲ್ಲಿ ಪಂದ್ಯ ನಡೆಸುತ್ತಿರುವುದಕ್ಕೆ ಟೀಕೆಯೂ ವ್ಯಕ್ತವಾಗುತ್ತಿದೆ.