ಮುಂಬೈ: ವಿಶ್ವಕಪ್ ವೇಳೆ ಟೀಂ ಇಂಡಿಯಾ ಆಯ್ಕೆ ಸಮಿತಿ ಸದಸ್ಯರು ಅನುಷ್ಕಾ ಶರ್ಮಾಗೆ ಚಹಾ ಕಪ್ ಸರಬರಾಜು ಮಾಡುತ್ತಿದ್ದರು ಎಂಬ ಮಾಜಿ ಕ್ರಿಕೆಟಿಗ ಫಾರುಖ್ ಇಂಜಿನಿಯರ್ ಆರೋಪಗಳಿಗೆ ಅನುಷ್ಕಾ ಪ್ರತಿಕ್ರಿಯಿಸಿದ್ದಾರೆ.
ನಾನು ಪ್ರತೀ ಬಾರಿ ಭಾರತೀಯ ಕ್ರಿಕೆಟ್ ಗೆ ಸಂಬಂಧಿಸಿದ ಟೀಕೆಗಳಿಗೆ ಸುಮ್ಮನೇ ಬಲಿಪಶುವಾಗಿರುತ್ತೇನೆ. ನಾನು ಕೇವಲ ಒಬ್ಬ ಕ್ರಿಕೆಟಿಗನ ಪತ್ನಿಯಷ್ಟೇ. ಹಾಗಂತ ಪ್ರತೀ ವಿವಾದದಲ್ಲೂ ನನ್ನ ಹೆಸರು ಎಳೆದು ತರುವುದು ಸರಿಯಲ್ಲ. ನಾನು ಸಾಮಾನ್ಯವಾಗಿ ಟೀಕೆಗೆ ಉತ್ತರಿಸಲ್ಲ. ಆದರೆ ಮಿತಿ ಮೀರಿದಾಗ ಉತ್ತರಿಸಲೇ ಬೇಕಿದೆ ಎಂದು ಅನುಷ್ಕಾ ಸುದೀರ್ಘವಾಗಿ ತಮ್ಮ ಇನ್ ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ನಿಮಗೆ ತಂಡದ ವಿಚಾರದಲ್ಲಿ, ಕ್ರಿಕೆಟಿಗರ ಬಗ್ಗೆ ಅಥವಾ ಮಂಡಳಿ ಬಗ್ಗೆ ಟೀಕೆ ಮಾಡುವುದಿದ್ದರೆ ಮಾಡಬಹುದು. ಆದರೆ ಅದಕ್ಕೆ ನನ್ನ ಹೆಸರು ಎಳೆದು ತರಬೇಡಿ. ನಾನು ಸ್ವತಂತ್ರ ಮಹಿಳೆ. ನನಗೆ ನನ್ನದೇ ವೃತ್ತಿ ಜೀವನವಿದೆ. ನನ್ನ ಬದುಕನ್ನು ನಾನೇ ಕಟ್ಟಿಕೊಂಡಿದ್ದೇನೆ. ಅಷ್ಟಕ್ಕೂ ವಿಶ್ವಕಪ್ ವೇಳೆ ನಾನು ನನ್ನದೇ ಸ್ವಂತ ಖರ್ಚಿನಲ್ಲಿ ಇಂಗ್ಲೆಂಡ್ ಗೆ ತೆರಳಿದ್ದೆ. ಮತ್ತು ಅಲ್ಲಿ ಕ್ರಿಕೆಟಿಗರ ಕುಟುಂಬದವರಿಗೆ ಮೀಸಲಿದ್ದ ಆಸನದಲ್ಲಿ ಕೂತಿದ್ದೆ. ಅಷ್ಟಕ್ಕೂ ನಾನು ಚಹಾ ಸೇವಿಸಲ್ಲ. ಕಾಫಿ ಕುಡಿಯುತ್ತೇನೆ ಎಂದು ಅನುಷ್ಕಾ ಸುದೀರ್ಘವಾಗಿ ತಿರುಗೇಟು ನೀಡಿದ್ದಾರೆ.