ದಂಬುಲಾ: ಮಹಿಳೆಯರ ಏಷ್ಯಾ ಕಪ್ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಇಂದು ಹರ್ಮನ್ ಪ್ರೀತ್ ಕೌರ್ ನೇತೃತ್ವದ ಭಾರತ ಮಹಿಳಾ ಕ್ರಿಕೆಟ್ ತಂಡ ಇಂದು ನೇಪಾಳ ವಿರುದ್ಧ ಲೀಗ್ ಪಂದ್ಯವಾಡಲಿದ್ದು, ಇಂದು ಗೆದ್ದರೆ ಸೆಮಿಫೈನಲ್ ಗೇರಲಿದೆ.
ಹರ್ಮನ್ ಪ್ರೀತ್ ಕೌರ್ ಬಳಗ ಕಳೆದ ಪಂದ್ಯದಲ್ಲಿ ಯುಎಇ ವಿರುದ್ಧ ಭರ್ಜರಿ ಗೆಲುವು ಸಾಧಿಸಿತ್ತು. ಅದಕ್ಕೆ ಮೊದಲು ಪಾಕಿಸ್ತಾನ ವನಿತೆಯರ ವಿರುದ್ಧವೂ ದೊಡ್ಡ ಗೆಲುವು ಕಂಡಿತ್ತು. ಹೀಗಾಗಿ ಹೆಚ್ಚು ಕಡಿಮೆ ಭಾರತ ತಂಡ ಈಗಾಗಲೇ ಸೆಮಿಫೈನಲ್ ಸ್ಥಾನಕ್ಕೆ ಟವೆಲ್ ಹಾಕಿದೆ. ಇಂದು ಗೆದ್ದರೆ ಅಧಿಕೃತವಾಗಿ ಸೆಮಿಫೈನಲ್ ಗೇರಲಿದೆ.
ಏಷ್ಯಾ ಕಪ್ ಟೂರ್ನಿಯಲ್ಲಿ ಭಾರತ ತಂಡ ಇದುವರೆಗೆ ಅಜೇಯವಾಗಿ ಮುನ್ನಡೆಯುತ್ತಿದೆ. ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಮಿಂಚುತ್ತಿದೆ. ಬ್ಯಾಟಿಂಗ್ ನಲ್ಲಿ ಅನುಭವಿ ಸ್ಮೃತಿ ಮಂದಾನಾ, ಹರ್ಮನ್, ಶಫಾಲಿ ವರ್ಮ ಫಾರ್ಮ್ ನಲ್ಲಿರುವುದು ಭಾರತ ತಂಡಕ್ಕೆ ಪ್ಲಸ್ ಪಾಯಿಂಟ್. ಅದರ ಜೊತೆಗೆ ಕೆಳ ಕ್ರಮಾಂಕದಲ್ಲಿ ರಿಚಾ ಘೋಷ್ ಫಿನಿಶರ್ ನ ಪಾತ್ರವನ್ನು ಅದ್ಭುತವಾಗಿ ನಿಭಾಯಿಸುತ್ತಿದ್ದಾರೆ.
ಬೌಲಿಂಗ್ ನಲ್ಲೂ ಭಾರತ ತಂಡ ಬಲಿಷ್ಠವಾಗಿದೆ. ಇದೀಗ ಕನ್ನಡತಿ ಶ್ರೇಯಾಂಕ ಪಾಟೀಲ್ ಗಾಯಗೊಂಡು ತವರಿಗೆ ಮರಳಿದರೂ ಅವರ ಸ್ಥಾನ ತುಂಬ ಬಲ್ಲ ಆಟಗಾರರು ತಂಡದಲ್ಲಿದ್ದಾರೆ. ಇಂದಿನ ಈ ಪಂದ್ಯ ಸಂಜೆ 7 ಗಂಟೆಗೆ ನಡೆಯಲಿದೆ. ಸ್ಟಾರ್ ಸ್ಪೋರ್ಟ್ಸ್, ಹಾಟ್ ಸ್ಟಾರ್ ಆಪ್ ನಲ್ಲಿ ಲೈವ್ ಆಗಿ ಪಂದ್ಯ ವೀಕ್ಷಿಸಬಹುದು.