ಮಂಗಳೂರು: ಇದುವರೆಗೆ ನಿಯಂತ್ರಣದಲ್ಲಿದ್ದ ಕೇರಳದಲ್ಲಿ ಇದೀಗ ಕೊರೋನಾ ಪ್ರಕರಣ ದಿನೇ ದಿನೇ ಮಿತಿ ಮೀರುತ್ತಿದೆ. ಅದರಲ್ಲೂ ಗಡಿ ನಾಡು ಕಾಸರಗೋಡಿನಲ್ಲಿ ಮತ್ತೆ ಪ್ರಕರಣಗಳು ಹೆಚ್ಚಳವಾಗುತ್ತಿರುವುದು ಕರ್ನಾಟಕದ ಗಡಿ ಭಾಗಕ್ಕೂ ಆತಂಕ ತಂದಿದೆ.
ಕೇರಳದಲ್ಲಿ ನಿನ್ನೆ ಒಟ್ಟು ಸಾವಿರಕ್ಕೂ ಅಧಿಕ ಪ್ರಕರಣಗಳು ಪತ್ತೆಯಾಗಿತ್ತು. ಇದು ಕೇರಳದಲ್ಲಿ ಇದುವರೆಗಿನ ದಾಖಲೆ. ಅದರಲ್ಲೂ ವಿಶೇಷವಾಗಿ ಕಾಸರಗೋಡಿನಲ್ಲೇ ನಿನ್ನೆ 100 ಪ್ರಕರಣಗಳು ಪತ್ತೆಯಾಗಿವೆ.
ಅದೂ ಕರ್ನಾಟಕದ ಗಡಿ ಭಾಗಕ್ಕೆ ಹೊಂದಿಕೊಂಡ ಪ್ರದೇಶಗಳಲ್ಲೇ ಅತೀ ಹೆಚ್ಚು ಪ್ರಕರಣಗಳು ಕಂಡುಬಂದಿವೆ. ಇದು ಗಡಿನಾಡ ಜನರ ಆತಂಕಕ್ಕೆ ಕಾರಣವಾಗಿದೆ. ಇದಕ್ಕೆ ನಿಯಂತ್ರಣ ಹೇರಲು ಈಗಾಗಲೇ ಈ ಪ್ರದೇಶಗಳಲ್ಲಿ ಲಾಕ್ ಡೌನ್ ಕಟ್ಟುನಿಟ್ಟುಗೊಳಿಸಲಾಗಿದೆ. ಇಲ್ಲಿ ಮತ್ತೆ ಪ್ರಕರಣ ಹೆಚ್ಚಾದರೆ ಕರ್ನಾಟಕಕ್ಕೂ ಆತಂಕ ಹೆಚ್ಚು. ಹೀಗಾಗಿ ಕೇರಳದಲ್ಲಿ ಪ್ರಕರಣ ಹೆಚ್ಚುವುದು ಕರ್ನಾಟಕಕ್ಕೂ ಪರಿಣಾಮ ಬೀರಲಿದೆ.