ಬೆಂಗಳೂರು (ಆ.17): ರಾಜ್ಯದಲ್ಲಿ ಅಕ್ಟೋಬರ್-ನವೆಂಬರ್ ತಿಂಗಳಲ್ಲಿ ಕೊರೋನಾ ಮೂರನೇ ಅಲೆ ಎದುರಾಗುವ ಸಾಧ್ಯತೆ ದಟ್ಟವಾಗಿರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಜಿಲ್ಲಾ ಮಟ್ಟದಲ್ಲೇ ಕೊರೋನಾ ನಿಯಂತ್ರಣಕ್ಕಾಗಿ ಜಿಲ್ಲಾ ತಾಂತ್ರಿಕ ತಜ್ಞರ ಸಮಿತಿ (ಟಿಇಸಿ) ರಚನೆ ಮಾಡಿ ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ.
ಜತೆಗೆ, ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿರುವ ದಕ್ಷಿಣ ಕನ್ನಡ, ಉಡುಪಿ, ಹಾಸನ, ಮೈಸೂರು, ಕೊಡಗು, ಚಿಕ್ಕಮಗಳೂರು ಹಾಗೂ ಚಾಮರಾಜನಗರದಲ್ಲಿ ಸೋಂಕಿತರ ಸಂಪರ್ಕಿತರ ಪತ್ತೆಗೆ ವಿಶೇಷ ಕ್ರಮ ಕೈಗೊಳ್ಳುವಂತೆ ಆದೇಶಿಸಲಾಗಿದೆ. ಈ ಜಿಲ್ಲೆಗಳಲ್ಲಿ ಪ್ರತಿ ಸೋಂಕಿತರ ಕನಿಷ್ಠ 20 ಮಂದಿ ಪ್ರಾಥಮಿಕ ಹಾಗೂ ದ್ವಿತೀಯ ಹಂತದ ಸಂಪರ್ಕಿತರನ್ನು ಪತ್ತೆ ಹಚ್ಚಿ ಪರೀಕ್ಷೆಗೊಳಪಡಿಸುವಂತೆ ಸೂಚಿಸಲಾಗಿದೆ.
ಟಿಇಸಿ ಸಮಿತಿಯಲ್ಲಿ ಯಾರಿರಬೇಕು?:
ಸಾರ್ವಜನಿಕ ಆರೋಗ್ಯ ವಿಭಾಗದ ಹಿರಿಯ ತಜ್ಞ ವೈದ್ಯರು, ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ, ಹಿರಿಯ ಶ್ವಾಸಕೋಶ ತಜ್ಞ, ತೀವ್ರ ನಿಗಾ ತಜ್ಞ, ಮಕ್ಕಳ ವೈದ್ಯರು, ಮೈಕ್ರೋಬಯೋಲಜಿಸ್ಟ್, ಹಿರಿಯ ಆಯುಷ್ ವೈದ್ಯರು ಸದಸ್ಯರಾಗಿರಬೇಕು. ಜತೆಗೆ ಜಿಲ್ಲಾ ಶಸ್ತ್ರಚಿಕಿತ್ಸಕರು, ಜಿಲ್ಲಾ ಆರೋಗ್ಯಾಧಿಕಾರಿಗಳು ವಿಶೇಷ ಆಹ್ವಾನಿರಾಗಿ ಇರಬೇಕು ಎಂದು ತಿಳಿಸಲಾಗಿದೆ.
ಸಮಿತಿಯು ಕನಿಷ್ಠ ಪ್ರತಿ 15 ದಿನಗಳಿಗೊಮ್ಮೆ ಸಭೆ ಸೇರಬೇಕು. ಅಗತ್ಯ ಬಿದ್ದರೆ ಇನ್ನೂ ತ್ವರಿತಗತಿಯಲ್ಲಿ ಸಭೆಗಳನ್ನು ಸೇರಬೇಕು. ಸಭೆಯ ನಡಾವಳಿ ಹಾಗೂ ಜಿಲ್ಲಾ ಮಟ್ಟದ ಬೆಳವಣಿಗೆಗಳ ಬಗ್ಗೆ ಸಮಿತಿಯು ಕೂಡಲೇ ಮಾಹಿತಿಯನ್ನು ಆರೋಗ್ಯ ಇಲಾಖೆ ಆಯುಕ್ತರು ಹಾಗೂ ರಾಜ್ಯ ಮಟ್ಟದ ತಾಂತ್ರಿಕ ಸಲಹಾ ಸಮಿತಿಗೆ ಕಳುಹಿಸಬೇಕು ಎಂದು ಸ್ಪಷ್ಟಪಡಿಸಲಾಗಿದೆ.