Beauty Tips: ಪ್ರತಿದಿನ ಎರಡು ಮೂರು ಚಮಚದಷ್ಟು ಟೊಮ್ಯಾಟೋ ರಸವನ್ನು ತೆಗೆದುಕೊಂಡು ಅದಕ್ಕೆ 2 - 3 ಹನಿ ನಿಂಬೆಹಣ್ಣಿನ ರಸವನ್ನು ಹಾಕಿ ಚೆನ್ನಾಗಿ ಕಲಸಿ ಮುಖದ ಮೇಲೆ ಇರುವಂತಹ ಸಣ್ಣ ರಂಧ್ರಗಳಿಗೆ ಲೇಪಿಸಿ
Tomato: ಟೊಮ್ಯಾಟೋವನ್ನು ಹೆಚ್ಚಾಗಿ ಸಾರಿಗೆ, ಪಲ್ಯಕ್ಕೆ, ತಿಂಡಿ ಮಾಡಲು, ಸ್ನ್ಯಾಕ್ಸ್ ಮಾಡಿದರೂ ಸಹ ಅದರ ಮೇಲೆ ಹಾಕಿಕೊಂಡು ತಿನ್ನಲು, ಹೀಗೆ ಅನೇಕ ಕಾರಣಗಳಿಗೆ ಅಡುಗೆ ಮನೆಯಲ್ಲಿ ಬಳಸುವಂತಹ ಮುಖ್ಯವಾದಂತಹ ತರಕಾರಿ ಎಂದರೆ ತಪ್ಪಾಗಲಾರದು.ಆದರೆ ಈ ಟೊಮ್ಯಾಟೋ ಬರಿ ಅಡುಗೆ ಮನೆಗೆ ಸೀಮಿತವಾಗಿಲ್ಲ. ಏಕೆಂದರೆ ಇದು ಅನೇಕ ತರಹದ ಗುಣಲಕ್ಷಣಗಳನ್ನು ಹೊಂದಿದ್ದು ನಮ್ಮ ಅಂದವನ್ನು ಚೆಂದವಾಗಿಡಲು ಸಹ ಬಳಸಬಹುದು. ಎಷ್ಟೋ ಸಾರಿ ಅಡುಗೆ ಮನೆಯಲ್ಲಿ ಬಳಸುವಂತಹ ತರಕಾರಿಗಳು ನಮ್ಮ ಅಂದವನ್ನು ಸಹ ಹೆಚ್ಚು ಮಾಡುತ್ತವೆ ಎಂದರೆ ನೀವು ನಂಬುತ್ತೀರಾ..? ಹೇಗೆ ಅಂತೀರಾ, ಬನ್ನಿ ನೋಡೋಣ. ಈ ರಸಭರಿತವಾದ ಟೊಮ್ಯಾಟೋದಲ್ಲಿ ಜೀವಸತ್ವಗಳು ಮತ್ತು ಅನೇಕ ಪೋಷಕಾಂಶಗಳಿದ್ದು ನಿಮ್ಮ ಮುಖದ ಆರೈಕೆಗೆ ಇದು ಉಪಯುಕ್ತವಾಗಿದೆ.
ಸತ್ತ ಚರ್ಮವನ್ನು ತೊಡೆದು ಹಾಕುತ್ತದೆ
ನೀವು ಮಹಾ ನಗರಗಳಲ್ಲಿ ತುಂಬಾ ವಾಯುಮಾಲಿನ್ಯ ಇರುವಂತಹ ಸ್ಥಳಗಳಲ್ಲಿ ಮನೆಯಿಂದ ಹೊರಗೆ ಹೋದರೆ ಸಾಕು ನಿಮ್ಮ ಚರ್ಮದ ಮೇಲೆ ತುಂಬಾ ಧೂಳು ಮತ್ತು ಅನೇಕ ತರಹದ ಹೊಗೆಯು ಮುಖದ ಮೇಲೆ ಕುಳಿತು ಸಾಮಾನ್ಯವಾಗಿ ಮುಖವನ್ನು ಸಾಬೂನಿನಿಂದ ತೊಳೆದರೂ ಆ ಜಿಡ್ಡು ಹೋಗುವುದಿಲ್ಲ. ಇದರಿಂದ ಕ್ರಮೇಣವಾಗಿ ಚರ್ಮವು ಸತ್ತೋಗುತ್ತದೆ. ಇಂತಹ ಸತ್ತಂತಹ ಚರ್ಮವನ್ನು ಹಿಂಪಡೆಯಲು ಟೊಮ್ಯಾಟೋವನ್ನು ಪ್ರತಿದಿನ ಸುಮ್ಮನೆ ಮುಖಕ್ಕೆ ಲೇಪಿಸಿಕೊಂಡು ಸ್ವಲ್ಪ ಸಮಯದ ನಂತರ ಮುಖವನ್ನು ಚೆನ್ನಾಗಿ ತೊಳೆದುಕೊಳ್ಳುವುದರಿಂದ ಮುಖದಲ್ಲಿ ಸತ್ತ ಚರ್ಮವು ಮಾಯವಾಗುತ್ತದೆ.
ಮುಖದ ಮೇಲಿನ ಆಯಿಲ್ ಸ್ಕಿನ್ ಕಡಿಮೆ ಮಾಡುತ್ತದೆ
ಮುಖದ ಮೇಲೆ ಆಯಿಲ್ ಸ್ಕಿನ್ ಮತ್ತು ಮುಖದ ತುಂಬೆಲ್ಲಾ ಮೊಡವೆಗಳು ಕಲೆಗಳಾಗುವುದನ್ನು ನೋಡಿರುತ್ತೇವೆ ಮತ್ತು ಈ ರೀತಿ ಎಣ್ಣೆಯನ್ನು ಹೋಗಲಾಡಿಸಲು ಟೊಮ್ಯಾಟೋವನ್ನು ಎರಡು ಹೋಳುಗಳಾಗಿ ಕತ್ತರಿಸಿ ಮುಖಕ್ಕೆ ಚೆನ್ನಾಗಿ ಒರೆಸಿಕೊಂಡು 10-15 ನಿಮಿಷಗಳ ನಂತರ ಮುಖವನ್ನು ತೊಳೆದರೆ ಸ್ವಲ್ಪ ದಿನಗಳವರೆಗೆ ಇದೇ ರೀತಿಯಾಗಿ ಮಾಡುವುದರಿಂದ ಮುಖದ ಮೇಲಿನ ಎಣ್ಣೆ ಮಾಯವಾಗಿ ನಿಮ್ಮ ಮುಖದ ಮೇಲಿನ ಚರ್ಮವು ಕಾಂತಿಯುತವಾಗಿ ಕಾಣುತ್ತದೆ.
ಮುಖದ ಮೇಲಿನ ಸಣ್ಣ ರಂಧ್ರಗಳನ್ನು ಮುಚ್ಚುತ್ತದೆ
ಪ್ರತಿದಿನ ಎರಡು ಮೂರು ಚಮಚದಷ್ಟು ಟೊಮ್ಯಾಟೋ ರಸವನ್ನು ತೆಗೆದುಕೊಂಡು ಅದಕ್ಕೆ 2 - 3 ಹನಿ ನಿಂಬೆಹಣ್ಣಿನ ರಸವನ್ನು ಹಾಕಿ ಚೆನ್ನಾಗಿ ಕಲಸಿ ಮುಖದ ಮೇಲೆ ಇರುವಂತಹ ಸಣ್ಣ ರಂಧ್ರಗಳಿಗೆ ಲೇಪಿಸಿ, ಸ್ವಲ್ಪ ಸಮಯದ ನಂತರ ಅಂದರೆ 15 ನಿಮಿಷಗಳ ನಂತರ ಮುಖವನ್ನು ತೊಳೆದರೆ ಸಣ್ಣ ರಂಧ್ರಗಳು ಕ್ರಮೇಣವಾಗಿ ಮಾಯವಾಗುತ್ತದೆ ಮತ್ತು ಕಲೆಗಳು ಸಹ ಮಾಯವಾಗುತ್ತವೆ. ಮುಖದ ಮೇಲೆ ಇರುವ ಸಣ್ಣ ರಂಧ್ರಗಳಲ್ಲಿ ಧೂಳು ಮತ್ತು ಕಣಗಳು ಕುಳಿತು ಕೊಳ್ಳುವುದರಿಂದ ಮುಖದ ಕಾಂತಿ ಹಾಳಾಗುತ್ತದೆ.
ನೈಸರ್ಗಿಕ ಸನ್ಸ್ಕ್ರೀನ್
ಟೊಮ್ಯಾಟೋ ಒಂದು ನೈಸರ್ಗಿಕವಾದ ಸನ್ಸ್ಕ್ರೀನ್ ಆಗಿದ್ದು, ಬಹಳಷ್ಟು ಜನರು ಬಿಸಿಲಿನ ತಾಪದಿಂದ ತಮ್ಮ ಮುಖದ ಕಾಂತಿ ಹಾಳಾಗಬಾರದೆಂದು ಸನ್ಸ್ಕ್ರೀನ್ ಅನ್ನು ಮುಖಕ್ಕೆ ಹಚ್ಚುವುದನ್ನು ನೋಡಿದ್ದೇವೆ. ಆದರೆ ಬಹಳಷ್ಟು ಜನರಿಗೆ ಟೊಮ್ಯಾಟೋ ಒಂದು ನೈಸರ್ಗಿಕವಾದ ಸನ್ಸ್ಕ್ರೀನ್ ಎಂದು ತಿಳಿದಿಲ್ಲ. ಎರಡು ಮೂರು ಚಮಚದಷ್ಟು ಮೊಸರನ್ನು ಅರ್ಧ ಟೊಮ್ಯಾಟೋ ಒಂದಿಗೆ ಕಲಸಿ ಮುಖಕ್ಕೆ ಹಚ್ಚಿ 15 ನಿಮಿಷದ ನಂತರ ಮುಖವನ್ನು ತೊಳೆದರೆ ನೀವು ಒಂದು ಸನ್ಸ್ಕ್ರೀನ್ ಹಚ್ಚಿದಂತೆ ಆಗದೆ ಇದ್ದರೂ ಒಂದು ರೀತಿಯ ನೈಸರ್ಗಿಕವಾದ ಸನ್ಸ್ಕ್ರೀನ್ನಂತೆಯೇ ಕೆಲಸ ಮಾಡುತ್ತದೆ.
ಸನ್ಬರ್ನ್ಗೆ ಉತ್ತಮ ಚಿಕಿತ್ಸೆ
ಟೊಮ್ಯಾಟೋದಲ್ಲಿ ಎ ಮತ್ತು ಸಿ ಜೀವಸತ್ವಗಳು ಇರುವುದರಿಂದ ಮುಖದ ಮೇಲೆ ಇರುವಂತಹ ಸನ್ಬರ್ನ್ಗಳನ್ನು ವಾಸಿಮಾಡುತ್ತದೆ. ಸನ್ಬರ್ನ್ ಆಗುವುದರಿಂದ ಮುಖದ ಮೇಲೆ ಕೆಂಪು ಕಲೆಗಳು ಮುಖದ ಮೇಲೆ ಬರುತ್ತವೆ. ಇದರಿಂದ ತುಂಬಾ ಕಿರಿಕಿರಿ ಆಗುವುದು ಸಹಜವಾಗಿದೆ. ಮಜ್ಜಿಗೆಯೊಂದಿಗೆ ಟೊಮ್ಯಾಟೋ ರಸವನ್ನು ಚೆನ್ನಾಗಿ ಕಲಸಿ ಮುಖಕ್ಕೆ ಹಚ್ಚಿಕೊಳ್ಳುವುದರಿಂದ ಮುಖದ ಮೇಲೆ ಇರುವಂತಹ ಸನ್ಬರ್ನ್ ಕಲೆಗಳು ಮಾಯವಾಗುತ್ತವೆ ಮತ್ತು ಚರ್ಮಕ್ಕೆ ತಂಪು ನೀಡುತ್ತದೆ.
ವಯಸ್ಕರ ಲಕ್ಷಣಗಳನ್ನು ಕಡಿಮೆ ಮಾಡುತ್ತದೆ
ಮುಖದ ಮೇಲೆ ಮೊಡವೆ, ಕಪ್ಪು ಕಲೆಗಳು, ಚರ್ಮ ಮುದುಡುವಿಕೆವನ್ನು ಹೋಗಲಾಡಿಸಿ ಚರ್ಮಕ್ಕೆ ಕಾಂತಿಯನ್ನು ಒದಗಿಸುವಂತಹ ಶಕ್ತಿ ಟೊಮ್ಯಾಟೋಗಿದೆ ಎಂದರೆ ಸುಳ್ಳಲ್ಲ. ಟೊಮ್ಯಾಟೋ ರಸವನ್ನು ಜೇನು ತುಪ್ಪದೊಂದಿಗೆ ಕಲಸಿಕೊಂಡು ಮುಖಕ್ಕೆ ಹಚ್ಚಿಕೊಂಡರೆ ಎಲ್ಲಾ ಕಲೆಗಳು ಮಾಯವಾಗಿ ನೀವು ವಯಸ್ಸಾದವರಂತೆ ಕಾಣುವ ಲಕ್ಷಣಗಳು ಕಡಿಮೆ ಆಗಿ ಕಡಿಮೆ ವಯಸ್ಸಾದವರಂತೆ ಕಾಣುತ್ತೇವೆ. ಟೊಮ್ಯಾಟೋ ಬಿ ಜೀವಸತ್ವವನ್ನು ಹೊಂದಿದ್ದು ಇದು ಮುಖದಲ್ಲಿರುವಂತಹ ಕಲೆಗಳನ್ನು ವಾಸಿಮಾಡುವಂತಹ ಶಕ್ತಿಯನ್ನು ಹೊಂದಿದೆ. ಈ ಟೊಮ್ಯಾಟೋ ರಸವನ್ನು ಮತ್ತು ಜೇನುತುಪ್ಪದ ಮಿಶ್ರಣವನ್ನು ಹಚ್ಚಿಕೊಂಡು 15 ನಿಮಿಷದ ನಂತರ ಮುಖವನ್ನು ತೊಳೆದುಕೊಂಡರೆ ಮುಖದಲ್ಲಿ ಕಾಂತಿ ಬರುತ್ತದೆ.