Webdunia - Bharat's app for daily news and videos

Install App

ಮುಖವನ್ನು ಕಾಂತಿಯುತವಾಗಿರಿಸಿಕೊಳ್ಳಲು ಏನು ಮಾಡಬೇಕು?

ನಾಗಶ್ರೀ ಭಟ್
ಬುಧವಾರ, 20 ಡಿಸೆಂಬರ್ 2017 (14:05 IST)
ಎಲ್ಲ ಮಹಿಳೆಯರೂ ತಮ್ಮ ಮುಖವು ಆಕರ್ಷಕವಾಗಿ, ಕಾಂತಿಯುತವಾಗಿರಬೇಕೆಂದು ಬಯಸುತ್ತಾರೆ. ನಾವು ದಿನನಿತ್ಯವೂ ಅನೇಕ ತೆರನಾದ ಮಾಲಿನ್ಯಗಳಿಗೆ ತ್ವಚೆಯನ್ನು ಒಡ್ಡುತ್ತೇವೆ. ನಿದ್ರೆಯ ಕೊರತೆ, ಮಾನಸಿಕ ಒತ್ತಡ, ಉತ್ತಮ ಆಹಾರ ಕ್ರಮದ ಕೊರತೆ, ಮಾಲಿನ್ಯ, ತೀವ್ರವಾದ ಸೂರ್ಯನ ಕಿರಣಗಳು ಹೀಗೆ ಇವೆಲ್ಲವೂ ನಿಮ್ಮ ಮುಖದ ಸೌಂದರ್ಯವನ್ನು ಕುಂದಿಸುತ್ತದೆ. 


ಇವೆಲ್ಲದರಿಂದ ನೀವು ದೂರ ಹೋಗಲು ಸಾಧ್ಯವಿಲ್ಲ, ಆದರೆ ಅವುಗಳನ್ನು ತಡೆಯಬಹುದು. ವಯಸ್ಸನ್ನು ನಿಲ್ಲಿಸಲು ಸಾಧ್ಯವಿಲ್ಲವಾದರೂ ಮುಖದ ಕಾಂತಿ ಕಡಿಮೆಯಾಗದಂತೆ ಹಾಗೆಯೇ ಇರಿಸಿಕೊಳ್ಳಬಹುದು. ಹಾಗಾದರೆ ನಿಮ್ಮ ಮುಖದ ಕಾಂತಿಯನ್ನು ನೀವೇ ಮನೆಯಲ್ಲಿ ಹೇಗೆ ಕಾಪಾಡಿಕೊಳ್ಳಬಹುದು ಎಂಬುದನ್ನು ತಿಳಿಯಲು ಕೆಳಗೆ ನೋಡಿ.
 
* ಒಂದು ಚಮಚ ಅರಿಶಿಣ ಪುಡಿಗೆ 4 ಚಮಚ ಕಡಲೆ ಹಿಟ್ಟು ಮತ್ತು ಹಾಲು ಅಥವಾ ನೀರನ್ನು ಸೇರಿಸಿ ಪೇಸ್ಟ್ ತಯಾರಿಸಿ. ಅದನ್ನು ನಿಮ್ಮ ಮುಖ ಮತ್ತು ಕತ್ತಿನ ಭಾಗಕ್ಕೆ ಹಚ್ಚಿ 20 ನಿಮಿಷಗಳ ನಂತರ ಬೆಚ್ಚಗಿನ ನೀರಿನಿಂದ ತೊಳೆಯಿರಿ. ಇದು ನಿಮ್ಮ ಮುಖವನ್ನು ಸ್ವಚ್ಛಗೊಳಿಸುತ್ತದೆ, ಚರ್ಮ ಸುಕ್ಕುಗಟ್ಟುವುದನ್ನು ತಡೆಯುತ್ತದೆ ಮತ್ತು ಮುಖದ ಕಾಂತಿಯನ್ನು ಕಾಪಾಡುತ್ತದೆ. ಉತ್ತಮ ಫಲಿತಾಂಶಕ್ಕಾಗಿ ಇದನ್ನು ನೀವು ವಾರಕ್ಕೆ ಎರಡು ಬಾರಿ ಮಾಡಿ.
 
* 2 ಚಮಚ ಅಲೋವೆರಾ ಜೆಲ್, 1/4 ಚಮಚ ಅರಿಶಿಣ, 1 ಚಮಚ ಜೇನು ಮತ್ತು 1 ಚಮಚ ಹಾಲನ್ನು ಸೇರಿಸಿ ಅದನ್ನು ನಿಮ್ಮ ಮುಖ ಮತ್ತು ಕತ್ತಿನ ಭಾಗಕ್ಕೆ ಹಚ್ಚಿ 20 ನಿಮಿಷಗಳ ನಂತರ ಬೆಚ್ಚಗಿನ ನೀರಿನಿಂದ ತೊಳೆಯಿರಿ. ಅಲೋವೆರಾ ಚರ್ಮದ ಎಲ್ಲಾ ಬಗೆಯ ವ್ಯಾಧಿಗಳಿಗೂ ಉತ್ತಮ ಔಷಧವಾಗಿದ್ದು ನಿಮ್ಮ ಮುಖದ ಕಾಂತಿಯನ್ನು ಹೆಚ್ಚಿಸುತ್ತದೆ. ಉತ್ತಮ ಫಲಿತಾಂಶಕ್ಕಾಗಿ ಇದನ್ನು ನೀವು ವಾರಕ್ಕೆ ಎರಡು ಬಾರಿ ಮಾಡಿ.
 
* 1 ಚಮಚ ಬೇಕಿಂಗ್ ಸೋಡಾ, 1 ಚಮಚ ಆಲಿವ್ ಆಯಿಲ್, 1 ಚಮಚ ಜೇನನ್ನು ಸೇರಿಸಿ ಆ ಮಿಶ್ರಣವನ್ನು ಮುಖ ಮತ್ತು ಕತ್ತಿನ ಭಾಗಕ್ಕೆ ಹಚ್ಚಿ 10 - 15 ನಿಮಿಷಗಳ ನಂತರ ತಣ್ಣಗಿನ ನೀರಿನಿಂದ ತೊಳೆಯಿರಿ. ಇದು ನಿಮ್ಮ ತ್ವಚೆಯಿಂದ ಸತ್ತ ಜೀವಕೋಶಗಳನ್ನು ತೆಗೆದುಹಾಕಿ ಕಾಂತಿಯುತ ತ್ವಚೆಯನ್ನು ನಿಮ್ಮದಾಗಿಸುತ್ತದೆ. ಇದನ್ನು ನೀವು ವಾರಕ್ಕೊಮ್ಮೆ ಮಾಡಬಹುದು.
 
* 2 ಚಮಚ ನಿಂಬೆ ರಸ ಮತ್ತು 2 ಚಮಚ ಸಕ್ಕರೆಯನ್ನು ಸೇರಿಸಿ ಅದನ್ನು ನಿಮ್ಮ ಮುಖಕ್ಕೆ ಹಚ್ಚಿಕೊಳ್ಳಿ. ವೃತ್ತಾಕಾರದಲ್ಲಿ ಸ್ಕ್ರಬ್ ಮಾಡಿಕೊಂಡು 10 ನಿಮಿಷಗಳ ಕಾಲ ಅದನ್ನು ಹಾಗೆಯೇ ಬಿಟ್ಟು ನಂತರ ಬೆಚ್ಚಗಿನ ನೀರಿನಿಂದ ಮುಖವನ್ನು ತೊಳೆಯಿರಿ. ಇದು ಸತ್ತ ಜೀವಕೋಶಗಳನ್ನು ತೆಗೆಯುವುದಲ್ಲದೇ ಮುಖವನ್ನು ಸ್ವಚ್ಛಗೊಳಿಸುತ್ತದೆ ಮತ್ತು ಬಿಸಿಲಿನಿಂದಾದ ಟ್ಯಾನ್ ಅನ್ನು ಸಹ ಹೋಗಲಾಡಿಸುತ್ತದೆ. ಉತ್ತಮ ಫಲಿತಾಂಶಕ್ಕಾಗಿ ನೀವು ಇದನ್ನು ವಾರಕ್ಕೆ ಎರಡು ಬಾರಿ ಮಾಡಿ.
 
* 2-3 ಚಮಚ ಸೌತೇಕಾಯಿಯ ರಸಕ್ಕೆ 2 ಚಮಚ ಮೊಸರನ್ನು ಸೇರಿಸಿ ಮುಖ ಮತ್ತು ಕತ್ತಿನ ಭಾಗಕ್ಕೆ ಹಚ್ಚಿಕೊಳ್ಳಿ. ಕಣ್ಣುಗಳ ಮೇಲೆ ಎರಡು ಸೌತೇಕಾಯಿಯ ಸ್ಲೈಸ್ ಅನ್ನು ಇಟ್ಟುಕೊಳ್ಳಿ. ಮುಖವು ಪೂರ್ತಿಯಾಗಿ ಒಣಗಿದ ನಂತರ ತಣ್ಣನೆಯ ನೀರಿನಿಂದ ಮುಖವನ್ನು ತೊಳೆಯಿರಿ. ಇದು ಕಣ್ಣಿನ ಸುತ್ತಲಿರುವ ಕಪ್ಪು ವರ್ತುಲವನ್ನು ಹೋಗಲಾಡಿಸುತ್ತದೆ ಮತ್ತು ಚರ್ಮದ ಬಣ್ಣವನ್ನು ಉತ್ತಮಗೊಳಿಸುತ್ತದೆ. ಉತ್ತಮ ಫಲಿತಾಂಶಕ್ಕಾಗಿ ನೀವು ಇದನ್ನು ವಾರಕ್ಕೆ ಎರಡು ಬಾರಿ ಮಾಡಬಹುದು.
 
* 2 ಚಮಚ ಜೇನನ್ನು ಮುಖಕ್ಕೆ ಹಚ್ಚಿ 10 ನಿಮಿಷಗಳ ನಂತರ ಮುಖವನ್ನು ಬೆಚ್ಚಗಿನ ನೀರಿನಿಂದ ತೊಳೆಯಿರಿ. ಇದು ಮುಖದ ಚರ್ಮವನ್ನು ಮೃದುವಾಗಿಸುತ್ತದೆ ಮತ್ತು ಕಲೆಗಳನ್ನು ಹೋಗಲಾಡಿಸುತ್ತದೆ. ಉತ್ತಮ ಫಲಿತಾಂಶಕ್ಕಾಗಿ ನೀವು ಇದನ್ನು ವಾರಕ್ಕೆ 3-4 ಬಾರಿ ಹಚ್ಚಿ.
 
* 30 ನಿಮಿಷ ಫ್ರಿಡ್ಜ್‌ನಲ್ಲಿಟ್ಟ ರೋಸ್ ವಾಟರ್ ಅನ್ನು ಒಂದು ಕಾಟನ್ ನಿಂದ ಮುಖ ಮತ್ತು ಕತ್ತಿನ ಭಾಗಕ್ಕೆ ಹಚ್ಚಿಕೊಳ್ಳಿ. 5 ನಿಮಿಷದ ನಂತರ ಮುಖವನ್ನು ತಣ್ಣನೆಯ ನೀರಿನಿಂದ ತೊಳೆಯಿರಿ. ಇದು ರಕ್ತ ಪರಿಚಲನೆಯನ್ನು ಉತ್ತಮಗೊಳಿಸಿ ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ ಮತ್ತು ಮುಖವು ಫ್ರೆಶ್ ಆಗಿ ಕಾಣುವಂತೆ ಮಾಡುತ್ತದೆ. ಉತ್ತಮ ಫಲಿತಾಂಶಕ್ಕಾಗಿ ದಿನವೂ ಬೆಳಿಗ್ಗೆ ಮತ್ತು ಸಂಜೆ ಇದನ್ನು ಮಾಡಿ.
 
* ಜೇನಿನಲ್ಲಿ 6-7 ಕೇಸರಿ ಎಸಳುಗಳನ್ನು ಹಾಕಿ ಸ್ವಲ್ಪ ಸಮಯದ ನಂತರ ಅದನ್ನು ಮುಖ ಹಾಗೂ ಕತ್ತಿನ ಭಾಗಕ್ಕೆ ಹಚ್ಚಿ 15 ನಿಮಿಷದ ನಂತರ ತಣ್ಣನೆಯ ನೀರಿನಿಂದ ತೊಳೆಯಿರಿ. ಇದು ಕಲೆಯನ್ನು ಹೋಗಲಾಡಿಸುತ್ತದೆ ಮತ್ತು ತ್ವಚೆಗೆ ಸೂರ್ಯನ ಕಿರಣದಿಂದ ಉಂಟಾಗುವ ಹಾನಿಯನ್ನು ತಡೆಯುತ್ತದೆ. ಉತ್ತಮ ಫಲಿತಾಂಶಕ್ಕಾಗಿ ನೀವು ಇದನ್ನು ವಾರಕ್ಕೆ 3-4 ಬಾರಿ ಹಚ್ಚಿ.
 
* ದಿನವೂ ರಾತ್ರಿ 1 ಚಮಚ ಆಲಿವ್ ಎಣ್ಣೆಯನ್ನು ಮುಖ ಹಾಗೂ ಕತ್ತಿನ ಭಾಗಕ್ಕೆ ಹಚ್ಚಿ. ಕೆಳಗಿನಿಂದ ಮೇಲಕ್ಕೆ ವೃತ್ತಾಕಾರದಲ್ಲಿ 5 ನಿಮಿಷ ಮುಖಕ್ಕೆ ಮಸಾಜ್ ಮಾಡಿ. ನಂತರ ಒದ್ದೆ ಟವಲ್ ಅನ್ನು ಮುಖದ ಮೇಲೆ 1 ನಿಮಿಷ ಇಟ್ಟುಕೊಳ್ಳಿ. ನಂತರ ಮುಖವನ್ನು ಬೆಚ್ಚಗಿನ ನೀರಿನಿಂದ ತೊಳೆಯಿರಿ. ಇದು ಚರ್ಮಕ್ಕೆ ಉತ್ತಮ ಮೊಯಿಶ್ಚರೈಸರ್ ಆಗಿದೆ. ಇದು ಮುಖದ ಜೀವಕೋಶಗಳನ್ನು ಆರೋಗ್ಯಕರವಾಗಿ ಮತ್ತು ಕಾಂತಿಯುತವಾಗಿ ಇರುವಂತೆ ನೋಡಿಕೊಳ್ಳುತ್ತದೆ.
 
ಹೀಗೆ ನೀವೇ 5-10 ನಿಮಿಷಗಳಲ್ಲಿ ಮಾಡಿಕೊಳ್ಳಬಹುದಾದ ಈ ಸಲಹೆಗಳನ್ನು ಒಮ್ಮೆ ಪ್ರಯತ್ನಿಸಿ ಇನ್ನಷ್ಟು ಯಂಗ್ ಆಗಿ ಕಾಣಿಸಿಕೊಳ್ಳಿ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಆಹಾರ ತಿಂದ ತಕ್ಷಣ ನೀರು ಕುಡಿಯಬಾರದೇಕೆ

ಸ್ಕಿನ್ ಟ್ಯಾನ್ ಆಗುತ್ತಿದ್ದರೆ ಏನು ಮಾಡಬೇಕು

ಪ್ರಯಾಣದಲ್ಲಿ ಕಾಡುವ ವಾಂತಿ ತಡೆಯಲು ಇಲ್ಲಿದೆ ಕೆಲ ಟಿಪ್ಸ್‌

ಕೈ ಜೋಮು ಹಿಡಿದಂತಾಗುತ್ತಿದೆಯೇ ಹಾಗಿದ್ದರೆ ಕಡೆಗಣಿಸಬೇಡಿ

ಸೋಮವಾರಗಳಂದು ನಮ್ಮ ಮೂಡ್ ಹೇಗಿರುತ್ತದೆ: ಇಂಟ್ರೆಸ್ಟಿಂಗ್ ವರದಿ ಇಲ್ಲಿದೆ

ಮುಂದಿನ ಸುದ್ದಿ
Show comments