ಟೂತ್‌ಪೇಸ್ಟ್ ಹಲ್ಲು ಸ್ವಚ್ಛಗೊಳಿಸಲು ಮಾತ್ರ ಎಂದುಕೊಂಡರೆ ಅದು ತಪ್ಪು. ಪೇಸ್ಟ್‌ನಿಂದ ಇನ್ನೂ ಹಲವಾರು ಕೆಲಸಗಳಿಗೆ ಬಳಸಬಹುದು. ಬಣ್ಣ ಬಣ್ಣದ ಪೇಸ್ಟ್‌ಗಳಿಗಿಂತ ಬಿಳಿ ಬಣ್ಣದ ಪೇಸ್ಟ್ ಹೆಚ್ಚು ಉಪಯೋಗಕಾರಿಯಾಗಿದೆ. ಸೌಂದರ್ಯವನ್ನು ಹೆಚ್ಚಿಸುವುದಲ್ಲದೆ ಇನ್ನೂ ಎಷ್ಟೋ ಕೆಲಸಗಳಿಗೆ ಬಳಸಬಹುದಾಗಿದೆ. ಹುಡುಗಿಯರಿಗಲ್ಲದೆ, ಹುಡುಗರಿಗೂ ಕೂಡ ಇದು ಉಪಯೋಗವೆ. ಅದು ಹೇಗೆಂದು ನೋಡಿ.
ಮುಖಕ್ಕೆ ಹಚ್ಚುವ ಮೊದಲು ತಿಳಿದುಕೊಳ್ಳಬೇಕಾದ ವಿಷಯ: ಮುಖದ ಮೇಲೆ ಮೊಡವೆ, ಕಪ್ಪು ಮಚ್ಚೆಗಳು, ಕಣ್ಣಿನ ಕೆಳಗೆ ಡಾರ್ಕ್ ಸರ್ಕಲ್ ಹೋಗಲಾಡಿಸಲು ಟೂತ್ ಪೇಸ್ಟ್ ಉಪಯೋಗಿಸಬಹುದು. ಇದಕ್ಕೆ ಬೆಳ್ಳಗಿನ ಟೂತ್ ಪೇಸ್ಟ್ ಮಾತ್ರ ಬಳಸಬೇಕು. ಇದರಲ್ಲಿ ಫ್ಲೊರೈಡ್ ಕಡಿಮೆ ಇರುತ್ತದೆ. ಇದರಿಂದ ಚರ್ಮಕ್ಕೆ ಯಾವುದೇ ಹಾನಿಯಾಗುವುದಿಲ್ಲ. ಈ ಸಲಹೆಯನ್ನು ಅನುಸರಿಸುವುದಕ್ಕೂ ಮುನ್ನ ಪೇಸ್ಟ್ ಮೇಲೆ ಬರೆದಿರುವ ಉತ್ಪನ್ನಗಳನ್ನು ಗಮನಿಸಿ. ಫ್ಲೋರೈಡ್ ಪ್ರಮಾಣ ಕಡಿಮೆ ಇರುವ ಪೇಸ್ಟ್ ಮಾತ್ರ ಬಳಸಬೇಕು. ನಿಮಗೆ ಯಾವುದಾದರೂ ಅಲರ್ಜಿ ಇದ್ದರೆ ಪೇಸ್ಟ್ ಅನ್ನು ಸ್ವಲ್ಪ ಕೈಗೆ ಹಚ್ಚಿಕೊಂಡು 5 ನಿಮಿಷ ಹಾಗೇ ಬಿಡಿ, ಇದರಿಂದ ಉರಿ, ಗುಳ್ಳೆಗಳು ಬಂದರೆ ಈ ಸಲಹೆಯನ್ನು ಅನುಸರಿಸಬೇಡಿ.
ಮೊಡವೆಗಳು ಮಾಯ: ಒಂದು ಬಟ್ಟಲಿನಲ್ಲಿ ಸ್ವಲ್ಪ ಪೇಸ್ಟ್ ತೆಗೆದುಕೊಳ್ಳಬೇಕು. ಅದರಲ್ಲಿ ಜೇನುತುಪ್ಪ ಹಾಕಿ ಮಿಶ್ರಣ ಮಾಡಬೇಕು. ಆ ಮಿಶ್ರಣವನ್ನು ಮುಖಕ್ಕೆ ಹಚ್ಚಿ 15 ನಿಮಿಷಗಳ ನಂತರ ನೀರಿನಲ್ಲಿ ಶುಭ್ರವಾಗಿ ತೊಳೆದುಕೊಳ್ಳಿ. ಹೀಗೇ ಮಾಡಿದರೆ ಕೆಲವು ದಿನಗಳಲ್ಲಿಯೆ ಮೊಡವೆಗಳು ಮಾಯವಾಗುತ್ತವೆ.
ಬ್ಲಾಕ್ ಹೆಡ್ಸ್: ಒಂದು ಬಟ್ಟಲಿನಲ್ಲಿ ಸ್ವಲ್ಪ ಟೂತ್ ಪೇಸ್ಟ್, ಉಪ್ಪು ತೆಗೆದುಕೊಂಡು ಸ್ವಲ್ಪ ನೀರು ಹಾಕಿ ಕಲಸಿಕೊಳ್ಳಿ. ಈ ಮಿಶ್ರಣವನ್ನು ಹಚ್ಚಿಕೊಳ್ಳುವ ಮೊದಲು ಮುಖಕ್ಕೆ ಆವಿ ತೆಗೆದುಕೊಳ್ಳಿ. ಇದರಿಂದ ಚರ್ಮದಲ್ಲಿನ ರಂಧ್ರಗಳು ತೆರೆಯುತ್ತವೆ. ಕೆಲವು ನಿಮಿಷಗಳ ನಂತರ ಉಪ್ಪು, ಪೇಸ್ಟ್ ಮಿಶ್ರಣವನ್ನು ಮುಖಕ್ಕೆ ಹಚ್ಚಿಕೊಳ್ಳಿ. 10-15 ನಿಮಿಷಗಳ ನಂತರ ತಣ್ಣಗಿನ ನೀರಿನಲ್ಲಿ ತೊಳೆದುಕೊಳ್ಳಿ. ಹೀಗೇ ಪ್ರತಿ ದಿನ ಮಾಡಿದರೆ ಉತ್ತಮ ಫಲಿತಾಂಶ ದೊರೆಯುತ್ತದೆ.
ಚರ್ಮದ ಮೇಲೆ ಸುಕ್ಕುಗಳು: ಸುಕ್ಕುಗಳು, ಮಚ್ಚೆಗಳು ಹೋಗಲಾಡಿಸಬೇಕಾದರೆ, ಚರ್ಮವನ್ನು ಬಿಗಿಗೊಳಿಸಲು ಟೂತ್ ಪೇಸ್ಟ್ ಒಳ್ಳೆಯ ಸಹಾಯಕಾರಿ. ರಾತ್ರಿಯ ಹೊತ್ತು ಸುಕ್ಕುಗಳು ಇರುವ ಜಾಗದಲ್ಲಿ ಸ್ವಲ್ಪ ಟೂತ್‌ಪೇಸ್ಟ್ ಹಚ್ಚಿರಿ. ಬೆಳಿಗ್ಗೆ ತಣ್ಣಗಿನ ನೀರಿನಲ್ಲಿ ಮುಖ ತೊಳೆದುಕೊಳ್ಳಿ. ಬೇಸಿಗೆಯಲ್ಲಿ ಚರ್ಮದ ಕಾಂತಿ ಕಡಿಮೆಯಾದರೆ ಸ್ವಲ್ಪ ನಿಂಬೆಹಣ್ಣಿನ ರಸವನ್ನು ಪೇಸ್ಟ್‌ನೊಂದಿಗೆ ಬೆರಿಸಿಕೊಳ್ಳಿ.
ಇನ್ನಿತರ ಪ್ರಯೋಜನಗಳು:
1. ಪೇಸ್ಟ್ ನಿಂದ ಸ್ಮಾರ್ಟ್ ಫೋನ್ ಸ್ಕೀನ್ ಶುಚಿಗೊಳಿಸಬಹುದು. ಸ್ವಲ್ಪ ಪೇಸ್ಟ್ ಅನ್ನು ಸ್ಕ್ರೀನ್‌ಗೆ ಹಚ್ಚಿ, ಶುಭ್ರವಾದ ಬಟ್ಟೆಯಿಂದ ಒರೆಸಿದರೆ ಸಾಕು ಸ್ಕ್ರೀನ್‌ನ ಹೊಳಪು ಹೆಚ್ಚಾಗುತ್ತದೆ.
2. ಬಟ್ಟೆಗಳ ಮೇಲೆ ಯಾವುದಾದರೂ ಕಲೆಗಳಿದ್ದರೆ, ಅಲ್ಲಿ ಸ್ವಲ್ಪ ಪೇಸ್ಟ್ ಹಚ್ಚಿ ಒಗೆಯಿರಿ.
3. CDಗಳು, DVD ಗಳ ಸ್ಕ್ರಾಚ್‌ಗಳನ್ನು ಹೋಗಲಾಡಿಸಲು.. ಸ್ವಲ್ಪ ಟೂತ್ ಪೇಸ್ಟ್ ಹಚ್ಚಿ ಶುಚಿಯಾದ ಬಟ್ಟೆಯಿಂದ ಒರೆಸಿರಿ.
4. ಬೆಳ್ಳಿ, ಹಿತ್ತಾಳೆ ವಸ್ತುಗಳನ್ನು ಹೊಳಪಾಗಿಸಲು... ಮೊದಲಿಗೆ ಅವುಗಳಿಗೆ ಪೇಸ್ಟ್ ಹಚ್ಚಿ ರಾತ್ರಿ ಪೂರ್ತಿ ಹಾಗೇ ಇರಿಸಿ. ಬೆಳಿಗ್ಗೆ ನೀರಿನಲ್ಲಿ ಶುಭ್ರಗೊಳಿಸಿದರೆ ಪಳಪಳ ಹೊಳೆಯುತ್ತದೆ.
5. ಮೀನುಗಳು, ಸೀಗಡಿಗಳು ಅಥವಾ ಮಾಂಸವನ್ನು ಮುಟ್ಟಿದಾಗ ನಿಮ್ಮ ಕೈಗಳ ವಾಸನೆಯನ್ನು ಹೋಗಲಾಡಿಸಲು, ಆಗ ಕೈಗೆ ಪೇಸ್ಟ್ ಹಚ್ಚಿಕೊಂಡರೆ ವಾಸನೆ ಇರುವುದಿಲ್ಲ.
6. ಕಾಲುಗಳ ಗಾಯಗಳಿಗೆ ಪೇಸ್ಟ್ ಹಚ್ಚಿದರೆ ಸ್ವಲ್ಪ ಉಪಶಮನ ಸಿಗುತ್ತದೆ.
7. ಕೀಟಗಳು ಕಡಿದ ಜಾಗದಲ್ಲಿ ಪೇಸ್ಟ್ ಹಚ್ಚಿದರೆ ಸ್ವಲ್ಪ ತಣ್ಣಗಾಗಿ ನೋವು ದೂರವಾಗುತ್ತದೆ.
8. ಕನ್ನಡಿಗಳು ಮಬ್ಬಾಗಿದ್ದರೆ ಪೇಸ್ಟ್ ಹಚ್ಚಿ ತೊಳೆದರೆ ಕಲೆಗಳು ಮಾಯವಾಗಿ ಹೊಳೆಯುತ್ತದೆ.
9. ಬಾತ್‌ರೂಮ್‌ನಲ್ಲಿ ಸಿಂಕ್‌ಗೆ ಸ್ವಲ್ಪ ಪೇಸ್ಟ್ ಹಚ್ಚಿ ತೊಳೆದರೆ ಕೊಳೆಬಿಟ್ಟು ಶುಚಿಯಾಗಿ ಕಾಣಿಸುತ್ತದೆ.
10. ಬೆಳ್ಳಗಿನ ಶೂಗಳ ಮೇಲೆ ಕಪ್ಪು ಚುಕ್ಕೆಗಳು ಕಾಣಿಸಿದರೆ ಸ್ವಲ್ಪ ಪೇಸ್ಟ್ ಹಚ್ಚಿ ಬಟ್ಟೆಯಿಂದ ಶುಚಿಗೊಳಿಸಿ.