ಭುವನೇಶ್ವರ : ಒಡಿಶಾದಲ್ಲಿ ಶುಕ್ರವಾರ ರಾತ್ರಿ ಸಂಭವಿಸಿದ ರೈಲು ದುರಂತದಲ್ಲಿ ಈವರೆಗೆ 233 ಮಂದಿ ಬಲಿಯಾಗಿದ್ದು, ಗಾಯಗೊಂಡವರ ಸಂಖ್ಯೆ 900ಕ್ಕೆ ಏರಿದೆ. ಈ ನಡುವೆ ಭೀಕರ ರೈಲು ದುರಂತ ಹೇಗಾಯ್ತು ಅನ್ನೋ ಸ್ಫೋಟಕ ಮಾಹಿತಿ ಹೊರಬಿದ್ದಿದೆ.
ಹೌದು.. ಘಟನಾ ಸ್ಥಳದಲ್ಲಿ 3 ರೈಲು ಮಾರ್ಗಗಳಿದ್ದವು. ಈ ವೇಳೆ ಕೋಲ್ಕತ್ತಾದ ಶಾಲಿಮಾರ್ ರೈಲು ನಿಲ್ದಾಣದಿಂದ ಚೆನ್ನೈಗೆ ಮೇನ್ ಲೈನ್ನಲ್ಲಿ ಸಂಜೆ 7:30ಕ್ಕೆ ಹೊರಟಿದ್ದ ಕೋರಮಂಡಲ್ ಎಕ್ಸ್ಪ್ರೆಸ್ (ಸಂಖ್ಯೆ: 12841) ಒಡಿಶಾದ ಬಹನಗಾ ಬಜಾರ್ ಸ್ಟೇಷನ್ ಬಳಿ ಹಳಿ ತಪ್ಪಿದೆ. ಇದರಿಂದಾಗಿ ಪಕ್ಕದ ಹಳಿಯಲ್ಲಿ ನಿಂತಿದ್ದ ಗೂಡ್ಸ್ ರೈಲಿಗೆ ಮೊದಲು ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ಪರಿಣಾಮ ಕೋರಮಂಡಲ್ ಎಕ್ಸ್ಪ್ರೆಸ್ನ 12 ಬೋಗಿಗಳು ಹಳಿ ತಪ್ಪಿ 3ನೇ ರೈಲು ಮಾರ್ಗದ ಮೇಲೆ ಬಿದ್ದಿವೆ.
ಕೆಲವು ಸಮಯದ ಬಳಿಕ ಇದೇ ಮಾರ್ಗವಾಗಿ ಮತ್ತೊಂದು ಹಳಿಯಲ್ಲಿ ವಿರುದ್ಧ ದಿಕ್ಕಿನಲ್ಲಿ ಬಂದ ಬೆಂಗಳೂರಿನ ಹೌರ ಎಕ್ಸ್ಪ್ರೆಸ್ (ಸಂಖ್ಯೆ: 12864) ಕೋರಮಂಡಲ್ನ ಬೋಗಿಗಳಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ನಾಲ್ಕು ಬೋಗಿಗಳು ಹಳಿ ತಪ್ಪಿವೆ. ಬೆಂಗಳೂರು – ಹೌರಾ ಎಕ್ಸ್ಪ್ರೆಸ್ ಬೈಯಪ್ಪನಹಳ್ಳಿಯ ಎಸ್ಎಂವಿಟಿ ರೈಲು ನಿಲ್ದಾಣದಿಂದ ಹೊರಟಿತ್ತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.