ಬೆಂಗಳೂರು(ಅ.13):ಮುಂಗಾರು ಅಂತ್ಯವಾಗಲು ಶುರುವಾಗಿ ಬಹಳ ದಿನಗಳಾಗಿದೆ, ಆದರೆ ಮಳೆಯ ಅಬ್ಬರ ಮಾತ್ರ ಕಡಿಮೆಯಾಗಿಲ್ಲ. ಒಂದೆಡೆ ವಾಯುಭಾರ ಕುಸಿತ ಹಾಗೂ ಮತ್ತೊಂದೆಡೆ ಜವಾಬ್ ಚಂಡಮಾರುತ ಪರಿಣಾಮ ದೇಶದ ಹಲವೆಡೆ ಭಾರೀ ಮಳೆಯಾಗುತ್ತಿದ್ದು, ರಾಜ್ಯದಲ್ಲಿ ಸಹ ಕಳೆದ ಮಳೆಯಾಗುತ್ತಿದೆ.
ಇನ್ನು ರಾಜ್ಯದಲ್ಲಿ ನೈರುತ್ಯ ಮುಂಗಾರು ತೀವ್ರಗೊಂಡಿರುವುದರಿಂದ ಅ.13 ರಿಂದ 15ರವರೆಗೆ ದಕ್ಷಿಣ ಒಳನಾಡು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಅಂಡಮಾನ್ ಸಮುದ್ರದ ಉತ್ತರ ಭಾಗದಲ್ಲಿ ಚಂಡಮಾರುತ ಪರಿಚಲನೆಯಿದೆ. ಇದರ ಪ್ರಭಾವ, ವಾಯುಭಾರ ಕುಸಿತ ಉಂಟಾಗಿದ್ದು ಜೊತೆಗೆ ಬಂಗಾಳ ಕೊಲ್ಲಿ ಮತ್ತು ಅರಬ್ಬಿ ಸಮುದ್ರದಲ್ಲಿ ಮೇಲ್ಮೈ ಸುಳಿ ಗಾಳಿ ಹಾಗೂ ವಾಯುಭಾರ ಕುಸಿತದ ಪರಿಣಾಮ ರಾಜ್ಯದಲ್ಲಿ ಮೂರ್ನಾಲ್ಕು ದಿನಗಳವರೆಗೆ ಗುಡುಗು, ಸಿಡಿಲು ಸಹಿತ ಹೆಚ್ಚು ಮಳೆಯಾಗುವ ಮುನ್ಸೂಚನೆ ಇದೆ ಎಂದು ಇಲಾಖೆ ಮಾಹಿತಿ ನೀಡಿದೆ.
ಇಂದು ಸಹ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಅಧಿಕ ಮಳೆಯಾಗುವ ಸಾಧ್ಯತೆ ಇದ್ದು, ರಾಜ್ಯದ ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ವ್ಯಾಪಕವಾಗಿ ಮಳೆ ಹಾಗೂ ಅಲ್ಲಲ್ಲಿ ಅಧಿಕ ಮಳೆಯಾಗಬಹುದು ಎಂದು ಅಂದಾಜಿಸಲಾಗಿದೆ. ಉತ್ತರ ಒಳನಾಡು, ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ವ್ಯಾಪಕವಾಗಿ ಮಳೆಯಾಗುವ ಸಾಧ್ಯತೆಯಿದೆ ಹಾಗೂ ರಾಜ್ಯದಾದ್ಯಂತ ಅಲ್ಲಲ್ಲಿ ಮಿಂಚು, ಗುಡುಗು ಸಹಿತ ಮಳೆಯಾಗುವ ನಿರೀಕ್ಷೆ ಇದೆ.