ದೆಹಲಿ : ಕೊರೊನಾ ವೈರಸ್ನ ಹೊಸ ರೂಪಾಂತರ ಒಮಿಕ್ರಾನ್ ಪರಿಸ್ಥಿತಿ ನಿಭಾಯಿಸಲು ಸೂಕ್ತ ಕ್ರಮ
ಕೈಗೊಳ್ಳದೆ ಹೋದರೆ ಭಾರತದಲ್ಲಿ ಕೊವಿಡ್ 19 ಮೂರನೇ ಅಲೆ ಬೃಹತ್ ಪ್ರಮಾಣದಲ್ಲಿ ಕಾಣಿಸಿಕೊಳ್ಳುವುದರಲ್ಲಿ ಸಂಶಯವೇ ಇಲ್ಲ ಎಂದು ಭಾರತೀಯ ವೈದ್ಯಕೀಯ ಸಂಘ ಹೇಳಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಐಎಂಎ ವೈದ್ಯರು, ಒಮಿಕ್ರಾನ್ ತಳಿ ಆತಂಕ ಉಂಟು ಮಾಡುವಂಥ ಸೋಂಕು, ಇದು ವೇಗವಾಗಿ ಹರಡುತ್ತದೆ ಮತ್ತು ಹೆಚ್ಚು ಜನರ ಮೇಲೆ ಪ್ರಭಾವ ಬೀರುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯೇ ಹೇಳಿದೆ.
ಭಾರತದಲ್ಲಿ ಕೊವಿಡ್ 19 ಸೋಂಕಿನ ಪ್ರಮಾಣ ಕಡಿಮೆಯಾಗುತ್ತಿತ್ತು. ನಿಧಾನಕ್ಕೆ ದೇಶ ಸಹಜಸ್ಥಿತಿಗೆ ಮರಳುತ್ತಿತ್ತು. ಹೀಗಿರುವಾಗ ಕಾಣಿಸಿಕೊಂಡ ಒಮಿಕ್ರಾನ್ ಒಂದು ದೊಡ್ಡ ಹಿನ್ನಡೆಯಾಗಿ ಪರಿಣಮಿಸಿದೆ ಎಂದು ಐಎಂಎ ಹೇಳಿದೆ.
ಒಮಿಕ್ರಾನ್ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೆಲವು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಕೇಂದ್ರ ಸರ್ಕಾರಕ್ಕೆ ಐಎಂಎ ಸಲಹೆ ನೀಡಿದೆ. ಮೊದಲು ಕೊವಿಡ್ 19 ವಿರುದ್ಧ ಮುಂಚೂಣಿ ಹೋರಾಟದಲ್ಲಿ ಇರುವ ಆರೋಗ್ಯ ಸಿಬ್ಬಂದಿ ಸೇರಿ ಎಲ್ಲ ಫ್ರಂಟ್ಲೈನ್ ವರ್ಕರ್ಗಳಿಗೂ ಇನ್ನೊಂದು ಡೋಸ್ ಕೊವಿಡ್ 19 ಲಸಿಕೆ ನೀಡಬೇಕು. ಹಾಗೇ ರೋಗ ನಿರೋಧಕ ಶಕ್ತಿ ಕಡಿಮೆ ಇರುವ ರೋಗಿಗಳಿಗೂ ಕೂಡ ಮೂರನೇ ಡೋಸ್ ಅಗತ್ಯವಿರುತ್ತದೆ ಎಂದು ವೈದ್ಯರು ಹೇಳಿದ್ದಾರೆ.