ಆಂಧ್ರಪ್ರದೇಶದ ಉದ್ಯಮಿಯೊಬ್ಬರಿಗೆ ಬಂಗಾರ ಎಂದು ಹಿತ್ತಾಳೆಯ ಚೂರುಗಳನ್ನು ಕೊಟ್ಟು 35 ಲಕ್ಷ ರೂ. ವಂಚನೆ ಮಾಡಿದ ಆರೋಪಿಯನ್ನು ಬಳ್ಳಾರಿ ಜಿಲ್ಲೆ ಹೂವಿನ ಹಡಗಲಿ ತಾಲೂಕಿನ ಹಿರೇಹಡಗಲಿ ಪೊಲೀಸರು ಬಂಧಿಸಿ ಹುಬ್ಬಳ್ಳಿಯ ವಿದ್ಯಾನಗರ ಪೊಲೀಸರಿಗೆ ಒಪ್ಪಿಸಿದ್ದಾರೆ.
ಜಗಳೂರು ತಾಲೂಕಿನ ಹುಚ್ಚವನಹಳ್ಳಿ ತಿಪ್ಪೇಸ್ವಾಮಿ ಬಂಧಿತ ಆರೋಪಿ. ಬಂಧಿತನಿಂದ 30 ಲಕ್ಷ ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಆಂಧ್ರಪ್ರದೇಶದ ನಲ್ಲೂರಿನ ಉದ್ಯಮಿ ವಿ.ಲಕ್ಷ್ಮಣ ರೆಡ್ಡಿ ಎಂಬುವವರಿಗೆ ಮಾ. 3 ರಂದು ಆರೋಪಿ ಫೋನ್ ಮಾಡಿದ್ದಾನೆ. ಮಾ. 10 ರಂದು ಹುಬ್ಬಳ್ಳಿಯ ಉಣಕಲ್ ಕ್ರಾಸ್‌ನಲ್ಲಿರುವ ಬಾರ್ ಆಂಡ್ ರೆಸ್ಟೋರೆಂಟ್‌ಗೆ ಕರೆಯಿಸಿಕೊಂಡಿದ್ದಾನೆ.
ಬಳಿಕ 3.5 ಕೆ ಜಿ ತೂಕದ ಹಿತ್ತಾಳೆ ಹೂವುಗಳನ್ನು ಬಂಗಾರದ ಹೂಗಳೆಂದು ನಂಬಿಸಿ ಕೊಟ್ಟು 35 ಲಕ್ಷ ರೂಪಾಯಿ ಪಡೆದು ವಂಚಿಸಿದ್ದಾನೆ. ಖಧೀಮರ ಜಾಡಿನ ಸುಳಿವು ಹಿಡಿದ ಹಿರೇಹಡಗಲಿ ಪಿಎಸ್ಐ ರಾಘವೇಂದ್ರ ನೇತೃತ್ವದ ತಂಡ ಸಿನಿಮೀಯ ರೀತಿಯಲ್ಲಿ ಖದೀಮರನ್ನು ಹೆಡೆಮುರಿಕಟ್ಟಿ ತಂದಿದ್ದಾರೆ.