ಕೊಲಂಬೊ : ಶ್ರೀಲಂಕಾದಲ್ಲಿ ಮುದ್ರಣ ಕಾಗದಕ್ಕೆ ಕೊರತೆ ಉಂಟಾಗಿದೆ.
ಈ ಹಿನ್ನೆಲೆಯಲ್ಲಿ ಶಾಲಾ ಮಕ್ಕಳಿಗೆ ನಡೆಯಬೇಕಾಗಿದ್ದ ಪರೀಕ್ಷೆಯನ್ನು ಮುಂದೂಡಲಾಗಿದೆ ಎಂದು
ಸರ್ಕಾರ ತಿಳಿಸಿದೆ.
ಎಲ್ಲ ಅಂದುಕೊಂಡಂತೆಯೇ ಆಗಿದ್ದರೆ ದೇಶಾದ್ಯಂತ ಸುಮಾರು 45 ಲಕ್ಷ ಮಂದಿ ಶಾಲಾ ವಿದ್ಯಾರ್ಥಿಗಳು ಪರೀಕ್ಷೆ ಬರೆಯಬೇಕಿತ್ತು. ಆದರೆ ಹಾಗಾಗಲಿಲ್ಲ. ದೇಶದಲ್ಲಿ ಪೇಪರ್ ಕೊರತೆ ಕಂಡುಬಂದಿದ್ದರಿಂದ ಸರ್ಕಾರ ಪರೀಕ್ಷೆಯನ್ನು ರದ್ದುಗೊಳಿಸಿದೆ.
ಶ್ರೀಲಂಕಾ ತೀವ್ರ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿರುವುದು ಜಗತ್ತಿಗೆ ಗೊತ್ತಿದೆ. ಇತ್ತೀಚಿಗಷ್ಟೆ ಭಾರತ ಸರ್ಕಾರ ಕೋಟ್ಯಂತರ ರೂಪಾಯಿ ನೆರವನ್ನು ಶ್ರೀಲಂಕಾಗೆ ನೀಡುವುದಾಗಿ ಘೋಷಿಸಿತ್ತು.
1948ರಲ್ಲಿ ಸ್ವಾತಂತ್ರ್ಯ ಗಿಟ್ಟಿಸಿಕೊಂಡ ನಂತರ ಇದೇ ಮೊದಲ ಬಾರಿ ಶ್ರೀಲಂಕಾದಲ್ಲಿ ಆರ್ಥಿಕ ಬಿಕ್ಕಟ್ಟು ಸೃಷ್ಟಿಯಾಗಿದೆ. ಹೀಗಾಗಿ ಪರಿಸ್ಥಿತಿ ಹದಗೆಡುತ್ತಿದ್ದು, ಅಗತ್ಯ ವಸ್ತೈಗಳಿಗೂ ಭಾರೀ ಕೊರತೆ ಉಂಟಾಗಿದೆ. ಇದರ ಬೆನ್ನಲ್ಲೇ ಈ ಮುಗ್ಗಟ್ಟು ಪರೀಕ್ಷೆಯ ಮೆಲೂ ಪರಿಣಾಮ ಸೃಷ್ಟಿಸಿದೆ.
ಶ್ರೀಲಂಕಾ ಅಧ್ಯಕ್ಷ ಗೊಟಬಯ ರಾಜಪಕ್ಸೆ ಅವರು ನೆರವಿಗಾಗಿ ವಿಶ್ವ ಬ್ಯಾಂಕ್ ಅನ್ನೂ ಸಂಪರ್ಕಿಸಿದ್ದಾರೆ. ಈ ಬಗ್ಗೆ ವಿಶ್ವ ಬ್ಯಾಂಕ್ ಇದುವರೆಗೂ ಏನನ್ನೂ ಹೇಳಿಲ್ಲ.
ವಿದ್ಯಾರ್ಥಿಗಳು ಪರೀಕ್ಷೆಯನ್ನು ಯಾವಾಗ ಕೈಗೊಳ್ಳಲಾಗುವುದು ಎಂಬುದರ ಬಗ್ಗೆ ಸರ್ಕಾರ ಇನ್ನೂ ಖಚಿತವಾಗಿ ಹೇಳಿಲ್ಲ. ಹೀಗಾಗಿ ವಿದ್ಯಾರ್ಥಿಗಳು ಆತಂಕಗೊಂಡಿದ್ದಾರೆ.