ಬೆಂಗಳೂರು: ಈ ಬಾರಿ 10ನೇ ತರಗತಿಯ ಎಲ್ಲ ವಿದ್ಯಾರ್ಥಿಗಳೂ ಉತ್ತೀರ್ಣರಾಗುತ್ತಿರುವುದರಿಂದ ಪಿಯುಸಿ ಸೇರಬಯಸುವ ಎಲ್ಲರಿಗೂ ಪ್ರವೇಶಾವಕಾಶ ಕಲ್ಪಿಸಲು ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ.
ಗುರುವಾರ ಕೊನೆದಿನದ ಪರೀಕ್ಷೆಯ ನಂತರ ನಗರದ ಹಲವಾರು ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿದ ನಂತರ ಕೊನೆದಿನ ದಿನದ ಪರೀಕ್ಷೆಗೆ ಸಂಬಂಧಿಸಿದ ವಿವರಗಳನ್ನು ಸುದ್ದಿಗೋಷ್ಠಿಯಲ್ಲಿ ವಿವರಿಸಿದ ಅವರು, ಯಾವುದೇ ವಿದ್ಯಾರ್ಥಿಗೂ ತೊಂದರೆಯಾಗದಂತೆ ಎಲ್ಲರಿಗೂ ಪ್ರಥಮ ಪಿಯುಸಿ ಪ್ರವೇಶಕ್ಕೆ ಅನುವು ಮಾಡಿಕೊಡಲಾಗುವುದು ಎಂದರು.
ರಾಜ್ಯದ ಎಲ್ಲ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಪಿಯು ಕಾಲೇಜುಗಳಲ್ಲಿ ಒಟ್ಟಾರೆ 12 ಲಕ್ಷ ಸೀಟುಗಳು ಲಭ್ಯವಿವೆ. ಜಿಲ್ಲಾವಾರು ಅಂಕಿಅಂಶಗಳನ್ನು ಸಂಗ್ರಹಿಸಿದ್ದು ಅದಕ್ಕಾಗಿ ಅಧಿಕಾರಿಗಳ ಸಮನ್ವಯ ವ್ಯವಸ್ಥೆ ರೂಪಿಸಲಾಗುತ್ತಿದೆ. ಯಾವುದೇ ವಿದ್ಯಾರ್ಥಿಗೂ ಪಿಯು ಪ್ರವೇಶಕ್ಕೆ ಯಾವುದೇ ರೀತಿಯಲ್ಲೂ ತೊಂದರೆಯಾಗುವುದಿಲ್ಲ. ಯಾವುದೇ ಸಂಸ್ಥೆಗಳು ಸೀಟು ಹೆಚ್ಚಳದ ಪ್ರಸ್ತಾವನೆಯನ್ನು ಸಲ್ಲಿಸಿದರೆ, ಅವರ ಬೇಡಿಕೆಯನ್ನು ಪುರಸ್ಕರಿಸಲಾಗುವುದು ಎಂದು ಅವರು ಹೇಳಿದರು.
ಆಗಸ್ಟ್ 10ರ ವೇಳೆಗೆ ಎಸ್ ಎಸ್ ಎಲ್ ಸಿ ಪರೀಕ್ಷೆ ಫಲಿತಾಂಶ ಪ್ರಕಟಿಸಲಾಗುವುದು. ರಾಜ್ಯದ ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಗಳು ಪ್ರಶಾಂತ ವಾತಾವರಣದಲ್ಲಿ ನಡೆದವು. ಇಂದು ಬೆಂಗಳೂರಿನ ದೂರವಾಣಿನಗರದ ಐಟಿಐ ವಿದ್ಯಾಮಂದಿರ ಪ್ರೌಢಶಾಲೆ, ವಿದ್ಯಾಮಂದಿರ ಸೆಂಟ್ರಲ್ ಶಾಲೆ, ಕೆ.ಆರ್.ಪುರಂ ಕರ್ನಾಟಕ ಪಬ್ಲಿಕ್ ಶಾಲೆ, ವೆಂಕಟೇಶ್ವರ ಪ್ರೌಢಶಾಲೆ, ದೇವಸಂದ್ರದ ಭಾರತೀಯ ವಿದ್ಯಾನಿಕೇತನ ಪ್ರೌಢಶಾಲೆ, ಅವಲಹಳ್ಳಿಯ ಗ್ರೇಟ್ ಇಂಟರ್ನ್ಯಾಷನಲ್ ಸ್ಕೂಲ್, ವಿದ್ಯಾನಿಕೇತನ ಆಂಗ್ಲಪ್ರೌಢಶಾಲೆ, ಕಾಡುಗೋಡಿಯ ಶಾರದಾ ವಿದ್ಯಾಮಂದಿರ ಪ್ರೌಢಶಾಲೆ, ವೈಟ್ಫೀಲ್ಡ್ ನ ಉಜ್ವಲ ವಿದ್ಯಾಲಯ ಪ್ರೌಢಶಾಲೆ ಸೇರಿದಂತೆ ಹಲವಾರು ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಎಲ್ಲ ಕಡೆಯೂ ಸಾಮಾಜಿಕ ಅಂತರ ಕಾಯ್ದುಕೊಂಡು ಮಕ್ಕಳು ಅತ್ಯಂತ ಶಿಸ್ತಿನಿಂದ ಪರೀಕ್ಷೆಗೆ ಹಾಜರಾಗಿದ್ದರು. ನಮ್ಮ ವಿದ್ಯಾರ್ಥಿಗಳ ಶಿಸ್ತು ನನ್ನ ಮನಸೂರೆಗೊಂಡಿತು. ಮಕ್ಕಳ ಶಿಸ್ತು ಮತ್ತು ಧೈರ್ಯ ಪರೀಕ್ಷೆಯ ಯಶಸ್ಸಿನ ಪ್ರಮುಖ ಕಾರಣವಾಗಿದೆ ಎಂದು ಅವರು ತಿಳಿಸಿದರು.
ಇಂದೂ ಸಹ ಕೆಲವೆಡೆ ಶಾಸಕರು ಮತ್ತು ಸಚಿವರು ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜಿಲ್ಲಾಧಿಕಾರಿಗಳು, ಜಿಪಂ ಸಿಇಒಗಳು ಖುದ್ದಾಗಿ ಭೇಟಿ ನೀಡಿದ್ದಾರೆ ಮಕ್ಕಳನ್ನು ಹುರಿದುಂಬಿಸಿದ್ದಾರೆ. ಹಲವಾರು ಕಡೆಗಳಲ್ಲಿ ಸಂಘ ಸಂಸ್ಥೆಗಳು, ಜನಪ್ರತಿನಿಧಿಗಳು ಮಕ್ಕಳಿಗೆ ಉಪಹಾರ ವ್ಯವಸ್ಥೆ ಮಾಡಿದ್ದರು ಎಂದು ಹೇಳಿದ ಸಚಿವರು ಅವರೆಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಕಳೆದ ಬಾರಿಯ ವಾರ್ಷಿಕ ಪರೀಕ್ಷೆಗೆ ಹಾಜರಾಗಿದ್ದ ಮಕ್ಕಳಿಗಿಂತ ಹೆಚ್ಚಿನ ಸಂಖ್ಯೆಯ ಮಕ್ಕಳು ಹಾಜರಾಗಿದ್ದಾರೆ. ಮಕ್ಕಳ ಶೇ. ಹಾಜರಾತಿಯೂ ಸಹ ಈ ಬಾರಿ ಹೆಚ್ಚಾಗಿದೆ ಎಂದು ಅವರು ಹೇಳಿದರು.
ಭಾಷಾ-1 ವಿಷಯಕ್ಕೆ 8,19,694 ಅಭ್ಯರ್ಥಿಗಳು ನೊಂದಾಯಿಸಿದ್ದರೆ, 8,16,544 ಅಭ್ಯರ್ಥಿಗಳು ಹಾಜರಾಗಿ 3150 ಮಕ್ಕಳು ಗೈರು ಹಾಜರಾಗಿಯಾಗಿದ್ದಾರೆ. ಶೇ. 99.62 ಹಾಜರಾತಿ ಇದೆ. ಕಳೆದ ವರ್ಷ ಇದು 98.41 ಇತ್ತು. ಭಾಷಾ -2 ವಿಷಯಕ್ಕೆ 8,27,988 ಅಭ್ಯರ್ಥಿಗಳು ನೊಂದಾಯಿಸಿದ್ದರೆ, 8,24,686 ಅಭ್ಯರ್ಥಿಗಳು ಹಾಜರಾಗಿ 3302 ಮಕ್ಕಳು ಗೈರು ಹಾಜರಾಗಿಯಾಗಿದ್ದಾರೆ. ಶೇ. 99.60 ಹಾಜರಾತಿ ಇದೆ. ಕಳೆದ ವರ್ಷ ಇದು 98.47 ಇತ್ತು. ಭಾಷಾ -3 ವಿಷಯಕ್ಕೆ 8,17,640 ಅಭ್ಯರ್ಥಿಗಳು ನೊಂದಾಯಿಸಿದ್ದರೆ, 8,14,538 ಅಭ್ಯರ್ಥಿಗಳು ಹಾಜರಾಗಿ 3102 ಮಕ್ಕಳು ಗೈರು ಹಾಜರಾಗಿಯಾಗಿದ್ದಾರೆ. ಶೇ. 99.62 ಹಾಜರಾತಿ ಇದೆ. ಕಳೆದ ವರ್ಷ ಇದು 98.47 ಇತ್ತು.ಸ್ಕೌಟ್ಸ್-ಗೈಡ್ಸ್ ಸ್ವಯಂಸೇವಕರು ಹಾಜರಿದ್ದು ಮಕ್ಕಳಿಗೆ ಮಾರ್ಗದರ್ಶನ ನೀಡಿದರು. ಆರೋಗ್ಯ ಇಲಾಖಾ ಸಿಬ್ಬಂದಿ ಮಕ್ಕಳ ಆರೋಗ್ಯ ತಪಾಸಣೆ ಮಾಡಿದರು. ಎಲ್ಲ ಅಭ್ಯರ್ಥಿಗಳು ಮಾಸ್ಕ್ ಗಳನ್ನು ಧರಿಸಿದ್ದರು. ಮಾಸ್ಕ್ ಧರಿಸದೇ ಬಂದ ಅಭ್ಯರ್ಥಿಗಳಿಗೆ ಪರೀಕ್ಷಾ ಕೇಂದ್ರದಲ್ಲಿ ಮಾಸ್ಕ್ ನೀಡಲಾಯಿತು ಎಂದು ಅವರು ವಿವರಿಸಿದರು.
ಒಟ್ಟಾರೆಯಾಗಿ ಪರೀಕ್ಷೆ ಯಾವುದೇ ವಿಘ್ನಗಳಿಲ್ಲದೇ ಯಶಸ್ವಿಯಾಗಿ ನಡೆದಿದ್ದು ಇದಕ್ಕೆ ಕಾರಣೀಭೂತರಾದ ನಮ್ಮ ವಿದ್ಯಾರ್ಥಿಗಳು, ಶಿಕ್ಷಕರು, ಅಧಿಕಾರಿ ವೃಂದಕ್ಕೆ ಸುರೇಶ್ ಕುಮಾರ್ ಕೃತಜ್ಞತೆ ಸಲ್ಲಿಸಿದ್ದಾರೆ.