ಕೊರೊನಾ ಭೀತಿಯ ನಡುವೆ ನಡೆದ ಭಾಷಾ ವಿಷಯಗಳ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಶೇ. 99.65 ಹಾಜರಾತಿ ಇತ್ತು ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ
ಮಾತನಾಡಿದ ಅವರು, ಇಂದು ನಡೆದ ಪರೀಕ್ಷೆಯ ವೇಳೆ 18 ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿದೆ. ಮಕ್ಕಳ ಮುಖದಲ್ಲಿ ಒತ್ತಡ ಕಂಡು ಬರಲಿಲ್ಲ. ಬದಲಿಗೆ ನಿರಾಳತೆ ಹಾಗೂ ಸಂತೋಷ ಇತ್ತು ಎಂದರು.
ರಾಜ್ಯದ ಹಲವಡೆ ವ್ಯಾಪಕ ಮಳೆ ಇದ್ದರೂ ಮಳೆ ಹಾಗೂ ಸಾರಿಗೆ ಸಮಸ್ಯೆಯಿಂದ ಯಾವೊಬ್ಬ ವಿದ್ಯಾರ್ಥಿಯೂ ಗೈರು ಹಾಜರಾಗಿಲ್ಲ. ಪ್ರಥಮ ಭಾಷೆ ವಿಷಯದಲ್ಲಿ 8,19,694 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದು, ಇದರಲ್ಲಿ 7,83,881 ಹೊಸಬರಾಗಿದ್ದಾರೆ. 3350 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದು ಶೇ.99,62ರಷ್ಟು ಹಾಜರಾತಿ ದಾಖಲಾಗಿದೆ ಎಂದು ಅವರು ವಿವರಿಸಿದರು.
ದ್ವಿತೀಯ ಭಾಷೆ 8,27,988 ವಿದ್ಯಾರ್ಥಿಗಳು ಪರೀಕ್ಷೆಗೆ ನೊಂದಣಿ ಮಾಡಿಕೊಂಡಿದ್ದು, 8,24,686 ವಿದ್ಯಾರ್ಥಿಗಳು ಹಾಜರಾಗಿದ್ದರು. 3302 ಗೈರು ಹಾಜರಾತಿ ದಾಖಲಾಗಿದೆ. ತೃತೀಯ ಭಾಷೆ ವಿಯದಲ್ಲಿ 8,17,640 ವಿದ್ಯಾರ್ಥಿಗಳು ಪರೀಕ್ಷೆಗೆ ನೊಂದಣಿ ಮಾಡಿಕೊಂಡಿದ್ದು, 8,14,538 ಹಾಜರಾದ ವಿದ್ಯಾರ್ಥಿಗಳು ಆಗಿದ್ದರೆ, 3102 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದರು. ಶೇ.99.62ರಷ್ಟು ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ ಎಂದು ಅವರು ಹೇಳಿದರು.
ಕೊವಿಡ್ ಕೇರ್ ಸೆಂಟರ್ ನಲ್ಲಿ 67 ವಿದ್ಯಾರ್ಥಿಗಳು ಪರೀಕ್ಷೆ ಬರೆದರೆ, ವಿಶೇಷ ಕೊಠಡಿಯಲ್ಲಿ 152 ಹಾಗೂ ಹತ್ತಿರದ ಪರೀಕ್ಷಾ ಕೇಂದ್ರದಲ್ಲಿ 10,693 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ ಎಂದು ಸುರೇಶ್ ಕುಮಾರ್ ಹೇಳಿದರು.