ರಾಜ್ಯ ರಾಜಧಾನಿ ಬೆಂಗಳೂರಿನ ಜನರು ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಹೈರಾಣಾಗಿ ಹೋಗಿದ್ದಾರೆ.
ಜೊತೆಗೆ ಚಳಿಗಾಲ ಪ್ರಾರಂಭವಾಗಿರುವುದರಿಂದ ಮಳೆಯ ಜೊತೆಗೆ ಚಳಿಯು ಕೂಡ ಕಾಟ ಕೊಡಲು ಪ್ರಾರಂಭ ಮಾಡಿದೆ. ಇತ್ತ ಮನೆಯಲ್ಲಿ ರುಚಿರುಚಿಯಾದ ಅಡುಗೆ ಮಾಡಿಕೊಂಡು ತಿನ್ನೋಣ ಅಂದ್ರೆ ಬೆಲೆ ಏರಿಕೆಯ ಬಿಸಿ ಶಾಕ್ ನೀಡುತ್ತಿದೆ.
ಹೇಗಪ್ಪ ಇದರಿಂದ ರಕ್ಷಣೆ ಮಾಡಿಕೊಳ್ಳುವುದು ಅನ್ನುವ ಆತಂಕದಲ್ಲಿ ಇರುವ ರಾಜಧಾನಿ ಬೆಂಗಳೂರಿನ ಜನರಿಗೆ ಬೆಸ್ಕಾಂ ಮತ್ತೊಂದು ಶಾಕ್ ನೀಡಲು ಮುಂದಾಗಿದ್ದು, ಡಿಸೆಂಬರ್ 1 ರಿಂದ ಡಿಸೆಂಬರ್ 4 ರವರೆಗೆ ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ವಿದ್ಯುತ್ ಸಂಪರ್ಕ ಕಡಿತ ಮಾಡಲು ಬೆಸ್ಕಾಂ ನಿರ್ಧಾರ ಮಾಡಿದೆ.
ಹೀಗಾಗಿ ಗೃಹಿಣಿಯರು ಬೆಳಗ್ಗೆಯೇ ಅಡುಗೆ ಕೆಲಸವನ್ನು ಉಳಿಸಿಕೊಳ್ಳುವುದು ಸೂಕ್ತ ಜೊತೆಗೆ, ನಿಮ್ಮ ಮೊಬೈಲ್ ಚಾರ್ಜನ್ನು ಮುಂಚೆಯೇ ಮಾಡಿಕೊಳ್ಳುವುದು ಸೂಕ್ತ.
7 ಗಂಟೆಗಳ ಕಾಲ ವಿದ್ಯುತ್ ಸಂಪರ್ಕ ಕಟ್
ಈಗಾಗಲೇ ಕಳೆದ ಹಲವು ದಿನಗಳಿಂದ ನಿರ್ವಹಣೆ ಹಾಗೂ ಕಾಮಗಾರಿ ನೆಪದಲ್ಲಿ ಬೆಸ್ಕಾಂ ಬೆಂಗಳೂರಿನ ದಕ್ಷಿಣ ಪಶ್ಚಿಮ ಪೂರ್ವ ಹಾಗೂ ಉತ್ತರ ವಲಯದಲ್ಲಿ ವಿದ್ಯುತ್ ಸಂಪರ್ಕವನ್ನು ಆಗಾಗ ಕಡಿತ ಮಾಡುತ್ತಾ ಬಂದಿದೆ.. ಈಗ ಮತ್ತೆ ನಿರ್ವಹಣೆ ಹಾಗೂ ಕಾಮಗಾರಿ ನೆಪದಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಮಾಡಲು ಬೆಸ್ಕಾಂ ಮುಂದಾಗಿದೆ.
ಡಿಸೆಂಬರ್ 1 ರಿಂದ ಡಿಸೆಂಬರ್ 4 ರವರೆಗೆ ಬೆಂಗಳೂರಿನ ದಕ್ಷಿಣ ಹಾಗೂ ಪಶ್ಚಿಮ ವಲಯದಲ್ಲಿ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿವಿಧ ಕಾಮಗಾರಿಗಳ ಹಿನ್ನೆಲೆಯಲ್ಲಿ ಬೆಸ್ಕಾಂ ವಿದ್ಯುತ್ ಸಂಪರ್ಕ ಕಡಿತ ಮಾಡಿದೆ..
ಹೀಗಾಗಿ ಡಿಸೆಂಬರ್ 1 ರಿಂದ ಡಿಸೆಂಬರ್ 4ರವರೆಗೆ ನೀವು ವಿದ್ಯುತ್ ಬಳಸಿಕೊಂಡು ಯಾವುದೇ ಕೆಲಸ ಮಾಡಬೇಕು ಅಂದುಕೊಂಡ್ರು ಬೆಳಗ್ಗೆ ಹತ್ತು ಗಂಟೆಯ ಮುಂಚೆ ಅಥವಾ ಸಂಜೆ 5 ಗಂಟೆಯ ನಂತರ ಮಾಡಿಕೊಳ್ಳುವುದು ಸೂಕ್ತ.