ನವದೆಹಲಿ : 'ಪಿಎಂ ಕೇರ್ಸ್ ಫಂಡ್' ಸರ್ಕಾರದ ನಿಧಿಯಲ್ಲ. ಅದಕ್ಕೆ ನೀಡುವ ದೇಣಿಗೆಗಳು ಭಾರತದ ಬೊಕ್ಕಸಕ್ಕೆ ಹೋಗುವುದಿಲ್ಲ ಎಂದು ದೆಹಲಿ ಹೈಕೋರ್ಟ್ಗೆ ಕೇಂದ್ರ ಸರ್ಕಾರ ಗುರುವಾರ ಮಾಹಿತಿ ನೀಡಿದೆ. ಮಾಹಿತಿ ಹಕ್ಕು ಕಾಯ್ದೆಯ (ಆರ್ಟಿಐ) ಅಡಿಯಲ್ಲಿ ಈ ನಿಧಿಗೆ ಸಂಬಂಧಿಸಿದ ಮಾಹಿತಿ ಹಂಚಿಕೊಳ್ಳಲು ಸಾಧ್ಯವಿಲ್ಲ ಎಂದು ತಿಳಿಸಿದೆ.
ಪ್ರಧಾನಿ ಕಚೇರಿಯ (ಪಿಎಂಒ) ಅಧೀನ ಕಾರ್ಯದರ್ಶಿ ಪ್ರದೀಪ್ ಕುಮಾರ್ ಶ್ರೀವಾಸ್ತವ ಅವರು ಕೋರ್ಟ್ಗೆ ಪ್ರಮಾಣಪತ್ರ ಸಲ್ಲಿಸಿದ್ದಾರೆ. ಪಿಎಂ ಕೇರ್ಸ್ ಟ್ರಸ್ಟ್ ಪಾರದರ್ಶಕತೆಯಿಂದ ಕಾರ್ಯ ನಿರ್ವಹಿಸುತ್ತಿದ್ದು, ಹಣವನ್ನು ಲೆಕ್ಕ ಪರಿಶೋಧಕರಿಂದ ಪರಿಶೋಧನೆಗೆ ಒಳಪಡಿಸ ಲಾಗುತ್ತಿದೆ ಎಂದು ಪ್ರಮಾಣಪತ್ರದಲ್ಲಿ ತಿಳಿಸಲಾಗಿದೆ.
ಆರ್ಟಿಐ ಕಾಯ್ದೆಯಡಿ ಪಿಎಂ ಕೇರ್ಸ್ ಅನ್ನು 'ಸಾರ್ವಜನಿಕ ಪ್ರಾಧಿಕಾರ' ಎಂದು ಘೋಷಿಸಲು ನಿರ್ದೇಶನ ನೀಡುವಂತೆ ಹಾಗೂ ಇದನ್ನು 'ಸರ್ಕಾರಿ' ನಿಧಿ ಎಂದು ಘೋಷಿಸಲು ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಗೆ ಉತ್ತರವಾಗಿ ಕೇಂದ್ರ ಸರ್ಕಾರವು ಈ ಪ್ರಮಾಣಪತ್ರ ಸಲ್ಲಿಸಿದೆ. ನ್ಯಾಯಮೂರ್ತಿಗಳಾದ ಡಿ.ಎನ್.ಪಟೇಲ್ ಮತ್ತು ಅಮಿತ್ ಬನ್ಸಲ್ ಅವರು ಮುಂದಿನ ವಿಚಾರಣೆಯನ್ನು ಸೆ. 27ಕ್ಕೆ ಮುಂದೂಡಿದರು.
'ಪಾರದರ್ಶಕತೆಯನ್ನು ಖಚಿತಪಡಿಸಿಕೊಳ್ಳಲು ಲೆಕ್ಕಪರಿಶೋಧನೆಯ ವರದಿಯನ್ನು ಟ್ರಸ್ಟ್ನ ಅಧಿಕೃತ ವೆಬ್ಸೈಟ್ನಲ್ಲಿ ಸ್ವೀಕರಿಸಿದ ನಿಧಿಯ ಬಳಕೆಯ ವಿವರಗಳೊಂದಿಗೆ ಪ್ರಕಟಿಸಲಾಗಿದೆ' ಎಂದು ತಿಳಿಸಲಾಗಿದೆ.
'ಸಂವಿಧಾನದ 12ನೇ ಪರಿಚ್ಛೇದದ ಅರ್ಥದಲ್ಲಿ ಈ ಟ್ರಸ್ಟ್ 'ಸರ್ಕಾರಿ' ಎಂದಾಗಲೀ, ಅಥವಾ ಆರ್ಟಿಐ ಕಾಯ್ದೆಯ ನಿಬಂಧನೆಗಳ ಅರ್ಥದಲ್ಲಿ 'ಸಾರ್ವಜನಿಕ ಪ್ರಾಧಿಕಾರ' ಎಂದಾಗಲೀ ಘೋಷಿಸಿಲ್ಲ. ಹಾಗಾಗಿ ಮೂರನೆಯವರಿಗೆ ಮಾಹಿತಿ ಬಹಿರಂಗ ಸಾಧ್ಯವಿಲ್ಲ' ಎಂದು ಪ್ರಮಾಣಪತ್ರ ಉಲ್ಲೇಖಿಸಿದೆ.
ಎಲ್ಲಾ ದೇಣಿಗೆಗಳನ್ನು ಆನ್ಲೈನ್ ಪಾವತಿಗಳು, ಚೆಕ್ಗಳು ಅಥವಾ ಡಿಮಾಂಡ್ ಡ್ರಾಫ್ಟ್ಗಳ ಮೂಲಕ ಟ್ರಸ್ಟ್ ಸ್ವೀಕರಿಸಿದ್ದು, ಈ ಮೊತ್ತವನ್ನು ಲೆಕ್ಕಪರಿಶೋಧನೆಯ ವರದಿಯೊಂದಿಗೆ ಪರಿಶೀಲಿಸಲಾಗುತ್ತದೆ. ಟ್ರಸ್ಟ್ ನಿಧಿಯ ವೆಚ್ಚವನ್ನು ವೆಬ್ಸೈಟ್ನಲ್ಲಿ ಪ್ರದರ್ಶಿಸಲಾಗುತ್ತದೆ ಎಂದು ತಿಳಿಸಲಾಗಿದೆ.
'ಟ್ರಸ್ಟ್ ಪಾರದರ್ಶಕತೆ ಮತ್ತು ಸಾರ್ವಜನಿಕ ಹಿತದ ತತ್ವಗಳ ಮೇಲೆ ಕಾರ್ಯನಿರ್ವಹಿಸುತ್ತಿದೆ. ಇತರ ಯಾವುದೇ ಚಾರಿಟಬಲ್ ಟ್ರಸ್ಟ್ಗಳಂತೆಯೇ ಸಾರ್ವಜನಿಕ ಹಿತಾಸಕ್ತಿ ಹೊಂದಿದೆ' ಎಂದು ತಿಳಿಸಲಾಗಿದೆ. 'ನಾನು ಕೇಂದ್ರ ಸರ್ಕಾರದ ಅಧಿಕಾರಿಯಾಗಿದ್ದರೂ, ಗೌರವಾನ್ವಿತವಾಗಿ ಪಿಎಂ ಕೇರ್ಸ್ ಟ್ರಸ್ಟ್ನಲ್ಲಿ ನನ್ನ ಕಾರ್ಯಗಳನ್ನು ನಿರ್ವಹಿಸಲು ನನಗೆ ಅನುಮತಿ ಇದೆ' ಎಂದು ಪ್ರದೀಪ್ ಕುಮಾರ್ ಹೇಳಿದ್ದಾರೆ.
ಪಿಎಂ ಕೇರ್ಸ್ ನಿಧಿಯು ಸರ್ಕಾರಿ ನಿಧಿ ಎಂದು ಪ್ರತಿಪಾದಿಸಿ ಸಮ್ಯಕ್ ಗಂಗ್ವಾಲ್ ಅವರು ಸಲ್ಲಿಸಿದ ಅರ್ಜಿಯನ್ನು ನ್ಯಾಯಾಲಯವು ವಿಚಾರಣೆ ನಡೆಸುತ್ತಿದೆ. ಸಾರ್ವಜನಿಕರ ನೆರವಿನೊಂದಿಗೆ ದೇಶದ ನಾಗರಿಕರಿಗೆ ನೆರವು ನೀಡಲು ಇದನ್ನು 2020ರ ಮಾರ್ಚ್ 27ರಂದು ಪ್ರಧಾನಿ ರಚಿಸಿದ್ದರು.
'ಪಿಎಂ ಹೆಸರು ಬೇಡ'
ಈ ಟ್ರಸ್ಟ್ನಲ್ಲಿ ಪ್ರಧಾನಿ, ರಕ್ಷಣೆ, ಗೃಹ ಮತ್ತು ಹಣಕಾಸು ಸಚಿವರು ಟ್ರಸ್ಟಿಗಳಾಗಿದ್ದಾರೆ. ಈ ಟ್ರಸ್ಟ್ ಸ್ಥಾಪನೆಯಾದ ಬಳಿಕ, ಇದು ಭಾರತ ಸರ್ಕಾರ ನಿರ್ವಹಿಸುವ ಟ್ರಸ್ಟ್ ಎಂದು ಹೇಳಲಾಗಿತ್ತು ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ. ಪಿಎಂ ಕೇರ್ಸ್ ನಿಧಿಯು ಭಾರತ ಸರ್ಕಾರದ ನಿಧಿ ಅಲ್ಲ ಎಂಬುದನ್ನು ಪ್ರಕಟಿಸುವಂತೆ ಕೇಂದ್ರಕ್ಕೆ ಸೂಚಿಸಬೇಕು ಎಂದೂ ಅರ್ಜಿದಾರರು ಕೋರಿದ್ದಾರೆ. ಭಾರತದ ಪ್ರಧಾನಿ ಎಂಬ ಹೆಸರು ಅಥವಾ ಪ್ರಧಾನ ಮಂತ್ರಿ ಎಂಬುದರ ಸಂಕ್ಷಿಪ್ತಾಕ್ಷರ ಪಿಎಂ ಎಂಬುದನ್ನು ಬಳಸದಂತೆಯೂ ಸೂಚನೆ ನೀಡಲು ಅವರು ವಿನಂತಿಸಿದ್ದಾರೆ.