ತೀರ್ಥಹಳ್ಳಿ : ಕೊರೊನಾ ಸೋಂಕು ಉಲ್ಬಣಗೊಂಡ ಬೆನ್ನಲ್ಲೇ ತಾಲೂಕಿನಲ್ಲಿ ಮಂಗನ ಕಾಯಿಲೆ ಜ್ವರದ ಪ್ರಕರಣ ಪತ್ತೆ ಆಗಿದ್ದು ಈ ವರ್ಷವು ಮಂಗನ ಕಾಯಿಲೆ ಭೀತಿ ಮಲೆನಾಡಿನ ಹಳ್ಳಿಗರಿಗೆ ಎದುರಾಗಿದೆ.
ಮಾಳೂರು ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಕೂಡಿಗೆ ಗ್ರಾಮದ ಮಹಿಳೆಯಲ್ಲಿ ಮಂಗನ ಕಾಯಿಲೆ ಎಂದೇ ಹೆಸರಾದ ಕ್ಯಾಸನೂರು ಫಾರೆಸ್ಟ್ ಡಿಸೀಜ್(ಕೆಎಫ್ಡಿ) ವೈರಾಣು ಪತ್ತೆ ಆಗಿದೆ. ಮಹಿಳೆ ಪಟ್ಟಣದ ಸರಕಾರಿ ಜೆಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಆರೋಗ್ಯ ಸುಧಾರಣೆ ಹಂತದಲ್ಲಿದೆ.
ಜ್ವರ ಕಂಡುಬಂದ ಗ್ರಾಮ, ಸುತ್ತಲಿನ ಗ್ರಾಮದಲ್ಲಿ ಮಂಗಗಳು ಮೃತಪಟ್ಟ ಪ್ರಕರಣ ವರದಿ ಆಗಿಲ್ಲ. ಮಹಿಳೆಯಲ್ಲಿ ಜ್ವರದ ವೈರಾಣು ಪತ್ತೆ ಆಗಿರುವುದು ಸಹಜವಾಗಿ ಆತಂಕ ಹೆಚ್ಚಿಸಿದೆ.
ಸುಮಾರು ನಾಲ್ಕೂವರೆ ದಶಕದಿಂದ ತಾಲೂಕಿನಲ್ಲಿ ಪ್ರತಿ ವರ್ಷ ಸತತವಾಗಿ ಕಂಡು ಬರುತ್ತಿರುವ ಮಂಗನ ಕಾಯಿಲೆ ಜ್ವರ ಈ ವರ್ಷ ಉಲ್ಬಣಗೊಳ್ಳುವ ಸಾಧ್ಯತೆ ಹೆಚ್ಚಿದೆ. ಕೊರೊನಾ ಸೋಂಕಿನ ಅಬ್ಬರದ ನಡುವೆ ಮಂಗನ ಕಾಯಿಲೆ ಜ್ವರದ ಪ್ರಕರಣ ಗೋಚರಿಸಿರುವುದು ಆಡಳಿತಕ್ಕೂ ತಲೆನೋವು ತಂದಿದೆ.
ಮಂಗನ ಕಾಯಿಲೆ ಜ್ವರ ನಿಯಂತ್ರಣಕ್ಕಾಗಿ ಕಳೆದ ನವೆಂಬರ್ ತಿಂಗಳಲ್ಲಿ ಆರೋಗ್ಯ ಇಲಾಖೆ ಲಸಿಕೆ ನೀಡಿದೆ. ಸಾಕಷ್ಟು ಜನರು ಲಸಿಕೆ ಪಡೆದರೂ ನಿರಾಕರಿಸಿದ ಪ್ರಕರಣ ಹಲವು ಇವೆ. 30 ವರ್ಷದಿಂದ ಮಂಡಗದ್ದೆ ಹೋಬಳಿ ವ್ಯಾಪ್ತಿ ಗ್ರಾಮಗಳಲ್ಲಿ ನಿರಂತರವಾಗಿ ಮಂಗನ ಕಾಯಿಲೆ ಜ್ವರ ಪತ್ತೆ ಆಗುತ್ತಲೇ ಇದೆ.