ದೇಶದಲ್ಲಿ ಇಂದು ಮತ್ತೊಂದು ಹಂತದ ಕೊವಿಡ್ 19 ಲಸಿಕೆ ಅಭಿಯಾನ ಶುರುವಾಗುತ್ತಿದೆ.
15-18ವರ್ಷದವರಿಗೆ ಇಂದಿನಿಂದ ಕೊವ್ಯಾಕ್ಸಿನ್ ಲಸಿಕೆ ನೀಡಲು ದೇಶಾದ್ಯಂತ ಸಿದ್ಧತೆಗಳು ನಡೆದಿವೆ. ಜ.1ರಿಂದಲೇ ಕೊವಿನ್ ಪೋರ್ಟಲ್ನಲ್ಲಿ ನೋಂದಣಿ ಮಾಡಿಕೊಳ್ಳುವ ಅವಕಾಶ ನೀಡಲಾಗಿತ್ತು.
ಹೀಗಾಗಿ ಭಾನುವಾರ ಸಂಜೆ ಹೊತ್ತಿಗೆ ಕೊವಿಡ್ 19 ಲಸಿಕೆಗಾಗಿ ಕೊವಿನ್ ಆ್ಯಪ್ನಲ್ಲಿ 6.35 ಲಕ್ಷ ಮಂದಿ ನೋಂದಣಿ ಮಾಡಿಕೊಂಡಿದ್ದಾರೆ. ಈ ವಯಸ್ಸಿನವರಿಗೆ ಭಾರತ್ ಬಯೋಟೆಕ್ನ ಕೊವ್ಯಾಕ್ಸಿನ್ ಲಸಿಕೆ ಮಾತ್ರ ನೀಡಲಾಗುತ್ತದೆ.
ಯಾಕೆಂದರೆ 15-18 ವಯಸ್ಸಿನವರಿಗೆ ತುರ್ತು ಬಳಕೆಗೆ ಕೊವ್ಯಾಕ್ಸಿನ್ ಬಿಟ್ಟು ಇನ್ಯಾವುದೇ ಲಸಿಕೆಗೂ ಅನುಮೋದನೆ ಸಿಕ್ಕಿಲ್ಲ. ಇಂದಿನಿಂದ ಶುರುವಾಗುತ್ತಿರುವ ಹೊಸ ಹಂತದ ಲಸಿಕಾ ಅಭಿಯಾನಕ್ಕಾಗಿ ಎಲ್ಲ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಿಗೆ, ಅಲ್ಲಿನ ಜನಸಂಖ್ಯೆ ಆಧಾರದ ಮೇಲೆ ಹೆಚ್ಚುವರಿಯಾಗಿ ಕೊವ್ಯಾಕ್ಸಿನ್ ಲಸಿಕೆ ಕಳಿಸಿಕೊಡಲಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ.
15-18 ವರ್ಷದವರಿಗಿನ ಎಲ್ಲರೂ ಕೊವಿಡ್ 19 ಲಸಿಕೆಯನ್ನು ಈ ಹಂತದಲ್ಲಿ ಪಡೆಯಬಹುದು. 15 ವರ್ಷವಾಗಿದೆಯಾ ಎಂಬ ಬಗ್ಗೆ ಯಾವುದೇ ಗೊಂದಲ ಬೇಡ. 2007ನೇ ಇಸ್ವಿಯಲ್ಲಿ ಜನಿಸಿದ ಎಲ್ಲರೂ ಕೊರೊನಾ ಲಸಿಕೆಯನ್ನು ಪಡೆಯಲು ಅರ್ಹರಾಗಿರುತ್ತಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.