ಬೆಂಗಳೂರು : ಉದ್ದೇಶಿತ ನೂತನ ಉದ್ಯೋಗ ನೀತಿಯು ಹೆಚ್ಚು ಉದ್ಯೋಗ ಸೃಷ್ಟಿಸುವ ಸಂಸ್ಥೆಗಳಿಗೆ ಪ್ರೋತ್ಸಾಹ ನೀಡುವುದರೊಂದಿಗೆ,
ಉದ್ಯಮ ವಲಯದಲ್ಲಿ ಬೇಡಿಕೆಯಲ್ಲಿರುವ ಕೌಶಲ್ಯಗಳ ತರಬೇತಿಗೂ ಆದ್ಯತೆ ನೀಡಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಲಹೆ ನೀಡಿದ್ದಾರೆ. ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆಗಾಗಿ ಈ ನೀತಿಯನ್ನು ಮಂಡಿಸುವಂತೆಯೂ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಮಂಗಳವಾರ ಗೃಹ ಕಚೇರಿ ಕೃಷ್ಣಾದಲ್ಲಿ ರಾಜ್ಯ ಸರ್ಕಾರ ಜಾರಿಗೊಳಿಸಲು ಉದ್ದೇಶಿಸಿರುವ ಉದ್ಯೋಗ ನೀತಿ ಕುರಿತು ಹಿರಿಯ ಅಧಿಕಾರಿಗಳ ಸಭೆ ನಡೆಸಿದರು. ಈ ಸಂದರ್ಭದಲ್ಲಿ ಕೈಗಾರಿಕಾ ನೀತಿಯಲ್ಲಿ ಉದ್ಯೋಗ ಸೃಜನೆ ಹೆಚ್ಚಾಗಿ ಮಾಡುವ ವಸೊತ್ರೕದ್ಯಮ, ಎಫ್ಎಂಸಿಜಿ ಮತ್ತಿತರ ಹೆಚ್ಚಿನ ಮಾನವಸಂಪನ್ಮೂಲ ಬೇಡಿಕೆ ಇರುವ ಉದ್ಯಮಗಳಿಗೆ ಪ್ರೋತ್ಸಾಹ ನೀಡಬೇಕು.
ಇದರೊಂದಿಗೆ ಕೈಗಾರಿಕೋದ್ಯಮಗಳಲ್ಲಿ ಬೇಡಿಕೆ ಇರುವ ಕ್ಷೇತ್ರಗಳಲ್ಲಿ ಕೌಶಲ್ಯ ಅಭಿವೃದ್ಧಿ ತರಬೇತಿಯನ್ನು ಇನ್ನಷ್ಟುಹೆಚ್ಚಿಸಬೇಕು ಎಂದು ಸೂಚಿಸಿದರು. ರಾಜ್ಯದಲ್ಲಿ ಸೃಜನೆಯಾಗುವ ಉದ್ಯೋಗಾವಕಾಶಗಳು ಹಾಗೂ ಉದ್ಯೋಗ ಪಡೆದವರ ದತ್ತಾಂಶ ಸಂಗ್ರಹಕ್ಕೆ ವ್ಯವಸ್ಥೆ ರೂಪಿಸಬೇಕು.