ಬರ್ನ್ : ಮಂಕಿಪಾಕ್ಸ್ ವೈರಸ್ ಹರಡುವಿಕೆ ಬಗ್ಗೆ ಜಾಗತಿಕವಾಗಿ ಕಳವಳ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ವಿಶ್ವ ಆರೋಗ್ಯ ಸಂಸ್ಥೆ ಲಸಿಕೆ ಸೇರಿದಂತೆ ಇತರ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.
ಮಂಕಿಪಾಕ್ಸ್ ವೈರಸ್ ಜಾಗತಿಕವಾಗಿ ಹರಡುತ್ತಿದ್ದು, ಇದನ್ನು ಸಾರ್ವಜನಿಕ ಆರೋಗ್ಯ ತುರ್ತುಪರಿಸ್ಥಿತಿ ಎಂದು ವರ್ಗೀಕರಿಸಬೇಕೋ ಅಥವಾ ಬೇಡವೋ ಎಂಬ ಬಗ್ಗೆ ನಿರ್ಧರಿಸಲು ಮುಂದಿನ ವಾರ ತುರ್ತು ಸಭೆ ನಡೆಸಲಾಗುವುದು ಎಂದು ತಿಳಿಸಿದೆ.
ಸದ್ಯ ಜನರು ಸಾಮೂಹಿಕವಾಗಿ ಲಸಿಕೆಗಳನ್ನು ತೆಗೆದುಕೊಳ್ಳುವ ಅಗತ್ಯ ಇಲ್ಲ ಎಂದು WHO ತಿಳಿಸಿದ್ದು, ಮಂಕಿಪಾಕ್ಸ್ ಹೆಸರು ಬದಲಾವಣೆ ಮಾಡುವ ಬಗ್ಗೆ ಚರ್ಚೆ ನಡೆಯುತ್ತಿದೆ.
ಈ ಬಗ್ಗೆ ತಿಳಿಸಿದ WHO ಮಹಾನಿರ್ದೇಶಕ ಟೆಡ್ರೋಸ್ ಅಧಾನೋಮ್ ಘೆಬ್ರೆಯೆಸಸ್, ಮಂಕಿಪಾಕ್ಸ್ ಹೆಸರನ್ನು ಬದಲಾಯಿಸಲು ಪ್ರಪಂಚದಾದ್ಯಂತ ತಜ್ಞರು ಚರ್ಚೆ ನಡೆಸಿದ್ದಾರೆ. ಈ ಹೆಸರು ಜನ ಸಮುದಾಯದಲ್ಲಿ ತಾರತಮ್ಯ ಹಾಗೂ ಕಳಂಕಿತವಾಗಿದೆ ಎಂದು ಆಕ್ರೋಶ ವ್ಯಕ್ತವಾಗುತ್ತಿದೆ ಎಂದು ಹೇಳಿದರು.
ಮಂಕಿಪಾಕ್ಸ್ ಹೆಸರು ಬದಲಾವಣೆ ಬಗ್ಗೆ ನಾವು ಪ್ರಪಂಚದಾದ್ಯಂತ ತಜ್ಞರೊಂದಿಗೆ ಚರ್ಚೆ ನಡೆಸಿದ್ದೇವೆ. ಈ ಬಗ್ಗೆ WHO ಶೀಘ್ರವೇ ಹೊಸ ಹೆಸರನ್ನು ಘೋಷಿಸಲಿದೆ ಎಂದು ತಿಳಿಸಿದರು.