ಬೆಂಗಳೂರು : ನಗರದಲ್ಲಿ ನಿರ್ಮಾಣ ಹಂತದ ನಮ್ಮ ಮೆಟ್ರೋ ಪಿಲ್ಲರ್ ಕುಸಿದು ಬಿದ್ದು, ತಾಯಿ ಮಗು ಸಾವನ್ನಪ್ಪಿರುವ ಘಟನೆ ಬೆಂಗಳೂರಿಗರನ್ನು ತಲ್ಲಣಗೊಳಿಸಿದೆ. ಘಟನೆ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಆಘಾತ ವ್ಯಕ್ತಪಡಿಸಿದ್ದಲ್ಲದೇ ತುರ್ತು ಸಭೆ ನಡೆಸಿ ದುರಂತಕ್ಕೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳಲು ಆದೇಶಿಸಿದ್ದಾರೆ.
ಮಂಗಳವಾರ ಸಿಎಂ ಗೃಹ ಕಚೇರಿಯಲ್ಲಿ ಬೊಮ್ಮಾಯಿ ಬೆಂಗಳೂರು ನಗರ ಪೊಲೀಸ್ ಆಯುಕ್ತರು ಹಾಗೂ ಡಿಸಿಪಿಯೊಂದಿಗೆ ಸಭೆ ನಡೆಸಿದ್ದಾರೆ. ಮೆಟ್ರೋ ಅಧಿಕಾರಿಗಳಿಂದ ಘಟನೆ ಬಗ್ಗೆ ಮಾಹಿತಿ ಪಡೆದಿದ್ದು, ಕಾಮಗಾರಿಯ ಕಾಂಟ್ರಾಕ್ಟರ್ ಹಾಗೂ ಎಂಜಿನಿಯರ್ ವಿರುದ್ಧ ಕ್ರಿಮಿನಲ್ ಕೇಸ್ ದಾಖಲು ಮಾಡಲು ಸೂಚನೆ ನೀಡಿದ್ದಾರೆ.
ಸಭೆ ಬಳಿಕ ಮಾತನಾಡಿದ ಬೊಮ್ಮಾಯಿ, ಮೆಟ್ರೋ ಪಿಲ್ಲರ್ ಕುಸಿತಕ್ಕೆ ಸಂಬಂಧಪಟ್ಟಂತೆ ತಪ್ಪಿತಸ್ಥರ ವಿರುದ್ಧ ಕಾನೂನಾತ್ಮಕ ಕ್ರಮ ಕೈಗೊಳ್ಳಲು ತಿಳಿಸಿದ್ದೇನೆ. ಕಾಂಟ್ರಾಕ್ಟರ್ ಹಾಗೂ ಕಂಪನಿಯವರ ಮೇಲೆ ಕೇಸ್ ದಾಖಲಿಸಲು ಸೂಚಿಸಿದ್ದೇನೆ. ಜೊತೆಗೆ ಕಾಮಗಾರಿ ಎಂಜಿನಿಯರ್ನನ್ನು ಅಮಾನತು ಮಾಡಲು ಆದೇಶಿಸಿದ್ದೇನೆ ಎಂದಿದ್ದಾರೆ.