ನವದೆಹಲಿ(ಜು.22): ನ್ಯಾಯಾಲಯ ಮೆಟ್ಟಿಲೇರಿದ್ದ 53 ವರ್ಷ ಹಿಂದಿನ ಭೂವಿವಾದವೊಂದು, 108 ವರ್ಷದ ಅರ್ಜಿದಾರ ಸಾವನ್ನಪ್ಪಿದ ಬಳೀಕ ಸುಪ್ರೀಂಕೋರ್ಟ್ನಲ್ಲಿ ವಿಚಾರಣೆ ದಿನ ನಿಗದಿಯಾ ಘಟನೆ ಮಹಾರಾಷ್ಟ್ರದಲ್ಲಿ. ಇದು ಭಾರತ ನ್ಯಾಯಾಂಗ ಪ್ರಕ್ರಿಯೆಯ ನಿಧಾನಗತಿಯನ್ನು ವಿಡಂಬಿಸುವಂತಿದೆ.
* 1968ರ ಭೂವಿವಾದ 53 ವರ್ಷ ಕೋರ್ಟಲ್ಲೇ ಕೊಳೆತಿತ್ತು
* 108ರ ವೃದ್ಧ ಸತ್ತ ಬಳಿಕ ಜಮೀನು ಅರ್ಜಿ ಸುಪ್ರೀಂನಲ್ಲಿ ವಿಚಾರಣೆ!
* ಜಮೀನಿನ ಮೊದಲ ಮಾಲೀಕರು ಬ್ಯಾಂಕಿನಲ್ಲಿ ತೆಗೆದುಕೊಂಡ ಸಾಲಕ್ಕೆ ಈ ಜಮೀನನ್ನು ಅಡಮಾನ ಇಟ್ಟಿದ್ದರು
ಮಹಾರಾಷ್ಟ್ರದ ಸೊಪಾನ್ ನರಸಿಂಗ ಗಾಯಕ್ವಾಡ್ 1968ರಲ್ಲಿ ಭೂಮಿಯೊಂದನ್ನು ಖರೀದಿಸಿದ್ದರು. ಆದರೆ ಜಮೀನಿನ ಮೊದಲ ಮಾಲೀಕರು ಬ್ಯಾಂಕಿನಲ್ಲಿ ತೆಗೆದುಕೊಂಡ ಸಾಲಕ್ಕೆ ಈ ಜಮೀನನ್ನು ಅಡಮಾನ ಇಟ್ಟಿದ್ದರು ಎಂಬುದು ತಡವಾಗಿ ತಿಳಿದಿತ್ತು. ಆದರೆ ಬ್ಯಾಂಕು ಗಾಯಕ್ವಾಡ್ಗೆ ನೋಟಿಸ್ ನೀಡಲು ಆರಂಭಿಸಿತ್ತು. ಹೀಗಾಗಿ ಗಾಯಕ್ವಾಡ್ ಮೂಲ ಮಾಲೀಕರು ಮತ್ತು ಬ್ಯಾಂಕಿನ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದರು. ಜಿಲ್ಲಾ ಕೋರ್ಟ್ ಸೆ.10, 1982ರಂದು ಗಾಯಕ್ವಾಡ್ ಪರವಾಗಿಯೇ ತೀರ್ಪು ನೀಡಿತ್ತು.
ಅದನ್ನು ಪ್ರಶ್ನಿಸಿ ಮೂಲ ಮಾಲೀಕ 1987ರಲ್ಲಿ ಮೇಲ್ಮನವಿ ಸಲ್ಲಿಸಿದ್ದ. ಕೊನೆಗೆ ಗಾಯಕ್ವಾಡ್ ಪ್ರಕರಣವನ್ನು 1988ರಲ್ಲಿ ಬಾಂಬೆ ಹೈಕೋರ್ಟಿಗೆ ಕೊಂಡೊಯ್ದಿದ್ದರು. ಅದು ಬರೋಬ್ಬರಿ 27 ವರ್ಷಗಳ ಕಾಲ ಪ್ರಕರಣವನ್ನು ಬಾಕಿ ಉಳಿಸಿಕೊಂಡು ಕೊನೆಗೆ 2015ರಲ್ಲಿ ವಜಾ ಮಾಡಿತ್ತು. ಈ ಕೇಸನ್ನು ಸುಪ್ರೀಂಕೋರ್ಟಿಗೆ ಕೊಂಡೊಯ್ಯಲು ಗಾಯಕ್ವಾಡ್ ಹರಸಾಹಸ ಪಟ್ಟರು. ಕೋವಿಡ್ ಮುಂತಾದ ಕಾರಣಗಳಿಂದ ಅದೂ ತಡವಾಗಿತ್ತು. ಅಂತೂ ಈ ವರ್ಷ ಜು.12ರಂದು ಸುಪ್ರೀಂಕೋರ್ಟ್ ಈ ಪ್ರಕರಣದ ವಿಚಾರಣೆಗೆ ಒಪ್ಪಿತ್ತು. ಆದರೆ ದುರದೃಷ್ಟವಶಾತ್ ಆ ವೇಳೆಗಾಗಲೇ ವೃದ್ಧ ಪ್ರಾಣ ಬಿಟ್ಟಾಗಿತ್ತು