ವಿಜಯನಗರ : ಸತತ ಭಾರಿ ಮಳೆಯಿಂದಾಗಿ ತರಕಾರಿ ಬೆಳೆಗಳು ಹಾನಿಗೊಳಗಾಗಿದ್ದು ಮಾರುಕಟ್ಟೆಗೆ ತರಕಾರಿ ಆವಕ ಕುಸಿದಿದೆ.
ರೈತರು ಬೆಳೆ ಹಾನಿಯಾಗಿ ಸಂಕಟದ ಉರುಳಿಗೆ ಸಿಲುಕಿದರೆ ಗ್ರಾಹಕರಿಗೆ ಬೆಲೆ ಏರಿಕೆಯ ಬರೆ ಬಿದ್ದಿದೆ.
ಮಾರುಕಟ್ಟೆಗಳಿಗೆ ತರಕಾರಿ ಬಾರದಿರುವುದರಿಂದ ಎಲ್ಲ ತರಕಾರಿಗಳ ಬೆಲೆ ಗಗನಕ್ಕೇರುತ್ತಿದೆ. ಅದರಲ್ಲೂ ಟೊಮೇಟೊ, ಕ್ಯಾಪ್ಸಿಕಂ, ಬೀನ್ಸ್, ನುಗ್ಗೆಕಾಯಿ ಬೆಲೆ ದುಪ್ಪಟ್ಟಾಗಿದೆ. ಹೀಗಾಗಿ ದಿನ ನಿತ್ಯ ಅಡುಗೆಗೆ ತರಕಾರಿ ಖರೀದಿಸುವ ಜನರ ಜೇಬು ಖಾಲಿಯಾಗುತ್ತಿದೆ.
ಒಂದು ವೇಳೆ ಮಾರುಕಟ್ಟೆಗೆ ಬಂದ ತರಕಾರಿಯೂ ಬೇಗ ಕೊಳೆಯುತ್ತಿದೆ. ವೈವಿಧ್ಯಮಯ ತರಕಾರಿ ಸಂರಕ್ಷಿಸಿಕೊಳ್ಳುವಲ್ಲಿ ವ್ಯಾಪಾರಸ್ಥರು ಹೆಣಗಾಡುವಂತಾಗಿದೆ. ಮಳೆಗಾಲದಲ್ಲಿ ತರಕಾರಿ ಬೆಳೆಯುವುದೆ ದುಸ್ತರವಾಗಿದೆ. ಮೋಡ ಮುಸುಕಿದ ವಾತಾವರಣದ ಏರುಪೇರಿನಿಂದ ಬೆಳೆಯೂ ಸರಿಯಾಗಿ ಬಾರದೆ ಬೆಲೆ ಏರಿಕೆಗೆ ಕಾರಣವಾಗಿದೆ. ತರಕಾರಿ ಬೆಲೆ ಕೇಳಿದ ಜನರು ಬೆಚ್ಚಿ ಬೀಳುವ ಜತೆಗೆ ಖರೀದಿಸಲು ಹಿಂದೇಟು ಹಾಕುತ್ತಿದ್ದಾರೆ.
ಯಾವ್ಯಾವು ಎಷ್ಟು?
ನಗರದ ಎಪಿಎಂಸಿಯಲ್ಲಿ 15 ಕೆ.ಜಿ. ಬಾಕ್ಸ್ ಟೊಮೇಟೊ 600ರಿಂದ 1100 ರೂ.ಗೆ ಮಾರಾಟವಾಗುತ್ತಿದೆ. ಮಾರುಕಟ್ಟೆಯಲ್ಲಿ ಕೆ.ಜಿ.ಗೆ 60-80 ರೂ., ಗೆ ಟೊಮೇಟೊ ಸಿಗುತ್ತಿಲ್ಲ. ಬದನೆಕಾಯಿಗೆ 70ರಿಂದ 90 ರೂ., ಈರುಳ್ಳಿಗೆ 50ರಿಂದ 70 ರೂ.,ಇದ್ದು ಗ್ರಾಹಕರಲ್ಲಿ ಕಣ್ಣೀರು ತರಿಸಿದರೆ, ಸೌತೆಕಾಯಿ 50ರಿಂದ 70 ರೂ., ಕ್ಯಾರೇಟ್ 80ರಿಂದ 100 ರೂ., ಗೋರಿಕಾಯಿ 60 ರೂ., ಹೀರೇಕಾಯಿ 80 ರೂ., ಪಡವಲಕಾರಿ 70 ರೂ., ಹಾಗಲಕಾಯಿ 70 ರೂ., ಹಸಿ ಮೆಣಸಿನ ಕಾಯಿ 100 ರೂ., ಬೆಂಡೆಕಾಯಿ 80 ರೂ.,ಗೆ ಏರಿಕೆಯಾಗಿದೆ. ಇನ್ನೂ ಬೀನ್ಸ್ 120ರಿಂದ 150 ರೂ., ಇದ್ದು, ಜನಸಾಮಾನ್ಯರು ಖರೀದಿಸದಂತಾಗಿದೆ. ದೊಣ್ಣೆ ಮೆಣಸಿನಕಾಯಿ 150ರಿಂದ 170 ರೂ., ಇದೆ. ಆಲೂಗಡ್ಡೆ ಮಾತ್ರ 30 ರೂ. ಸಾಮಾನ್ಯವಾಗಿದೆ. ಇನ್ನೂ ಉಳಿದ ಎಲ್ಲ ತರಕಾರಿ ಬೆಲೆ ಗಗನಕ್ಕೇರಿದೆ.