Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಕೊರೋನಾ 3ನೇ ಅಲೆಯತ್ತ ಭಾರತ ದಾಪುಗಾಲು: ಆತಂಕ!

ಕೊರೋನಾ 3ನೇ ಅಲೆಯತ್ತ ಭಾರತ ದಾಪುಗಾಲು: ಆತಂಕ!
ನವದೆಹಲಿ , ಮಂಗಳವಾರ, 3 ಆಗಸ್ಟ್ 2021 (08:55 IST)
ನವದೆಹಲಿ(ಆ.03): ಇಡೀ ದೇಶ ಅನ್ಲಾಕ್ ಆಗಿ ಜನಜೀವನ ಸಹಜ ಸ್ಥಿತಿಗೆ ಮರಳಿರುವುದು ಹಾಗೂ ಸಾರ್ವಜನಿಕರು ಕೋವಿಡ್ ಮುನ್ನೆಚ್ಚರಿಕೆ ಕ್ರಮಗಳನ್ನು ಗಾಳಿಗೆ ತೂರಿರುವ ಹಿನ್ನೆಲೆಯಲ್ಲಿ ಭಾರತ ಕೋವಿಡ್ 3ನೇ ಅಲೆಯತ್ತ ದಾಪುಗಾಲು ಇಡುತ್ತಿರುವ ಆತಂಕ ಹೆಚ್ಚಾಗಿದೆ. 2ನೇ ಅಲೆಯ ಅಬ್ಬರದ ಬಳಿಕ ಇಳಿಮುಖವಾಗುತ್ತಿದ್ದ ಸೋಂಕು ಈಗ ಏರಲು ಆರಂಭಿಸಿದ್ದು, ದೇಶದಲ್ಲಿ ಸತತ 6ನೇ ದಿನವಾದ ಸೋಮವಾರವೂ 40 ಸಾವಿರಕ್ಕೂ ಅಧಿಕ ಸೋಂಕಿತರು ಪತ್ತೆಯಾಗಿದ್ದಾರೆ. ಇದೇ ವೇಳೆ, ಸಕ್ರಿಯ ಪ್ರಕರಣಗಳ ಸಂಖ್ಯೆ ಸತತ 6ನೇ ದಿನ ಹೆಚ್ಚಳವಾಗಿದೆ.

ಕಳೆದ ವಾರ ದೇಶದಲ್ಲಿ 2,76,534 ಸೋಂಕಿತರು ಪತ್ತೆಯಾಗಿದ್ದರು. ಅದಕ್ಕೂ ಹಿಂದಿನ ವಾರ 2,67,680 ಪ್ರಕರಣ ದೃಢಪಟ್ಟಿದ್ದವು. ಅಂದರೆ ವಾರದಿಂದ ವಾರಕ್ಕೆ ಸರಿಸುಮಾರು 9 ಸಾವಿರದಷ್ಟುಅಧಿಕ ಮಂದಿಯಲ್ಲಿ ಕೋವಿಡ್ ಕಾಣಿಸಿಕೊಂಡಿರುವುದು ಆತಂಕಕ್ಕೆ ಕಾರಣವಾಗಿದೆ. ಇನ್ನೊಂದೆಡೆ, ಆರ್- ಕೌಂಟ್ (ಪ್ರತಿ 100 ಸೋಂಕಿತರಿಂದ ಎಷ್ಟುಮಂದಿಗೆ ಸೋಂಕು ಹರಡುತ್ತದೆ ಎಂಬುದರ ಪ್ರಮಾಣ) ಜು.30ರಂದು ಶೇ.1.01ಕ್ಕೆ ತಲುಪಿದೆ. ಅಂದರೆ ಒಬ್ಬನಿಂದ 1.01 ಜನರಿಗೆ ಸೋಂಕು ಹಬ್ಬುತ್ತಿದೆ. ಮೇ ಮಧ್ಯಭಾಗದಲ್ಲಿ ಕೊರೋನಾ ಇಳಿಮುಖವಾಗುತ್ತಿದ್ದಾಗ ಆರ್ ಕೌಂಟ್ ಶೇ.0.78 ಇತ್ತು. ಅದು ಈಗ ಹೆಚ್ಚಾಗತೊಡಗಿರುವುದು ಭೀತಿಗೆ ಕಾರಣವಾಗಿದೆ.
ಈ ನಡುವೆ, ಇದೇ ತಿಂಗಳ ಬರುವ ವಾರಗಳಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಭಾರಿ ಏರಿಕೆ ಕಾಣಬಹುದು. ಅಕ್ಟೋಬರ್ಗೆ ಕೋವಿಡ್ 3ನೇ ಅಲೆ ತುತ್ತತುದಿಗೆ ತಲುಪಬಹುದು. ನಿತ್ಯ ಸೋಂಕಿತರ ಸಂಖ್ಯೆ 1 ಲಕ್ಷ ಗಡಿ ದಾಟಬಹುದು. ಪರಿಸ್ಥಿತಿ ಭೀಕರವಾದರೆ 1.50 ಲಕ್ಷಕ್ಕೂ ಏರಿಕೆಯಾಗಬಹುದು. ಆದರೆ ಎರಡನೇ ಅಲೆಯಷ್ಟುಮೂರನೇ ಅಲೆ ಅಪಾಯಕಾರಿಯಾಗುವ ಸಾಧ್ಯತೆ ಇಲ್ಲ ಎಂದು ಹೈದರಾಬಾದ್ ಹಾಗೂ ಕಾನ್ಪುರ ಐಐಟಿಯ ಸಂಶೋಧಕರು ಭವಿಷ್ಯ ನುಡಿದಿದ್ದಾರೆ.
ಆತಂಕಕಾರಿ ಎಂದರೆ, ಮೊದಲ ಹಾಗೂ ಎರಡನೇ ಅಲೆ ಆರಂಭವಾದ ಕೇರಳ ಮತ್ತು ಮಹಾರಾಷ್ಟ್ರದಲ್ಲಿ ಸೋಂಕು ಹೆಚ್ಚುತ್ತಲೇ ಇದೆ. ದೇಶದಲ್ಲಿ ಅತಿ ಹೆಚ್ಚು ಪ್ರಕರಣಗಳು ಕೇರಳದಲ್ಲಿ ವರದಿಯಾಗುತ್ತಿವೆ. ಸೋಂಕು ಹೆಚ್ಚುತ್ತಿದ್ದರೂ ದೇಶದ ಒಟ್ಟಾರೆ ಪಾಸಿಟಿವಿಟಿ ದರ ಶೇ.5ಕ್ಕಿಂತ ಕೆಳಗೆ ಇರುವುದು ಆಶಾದಾಯಕವಾಗಿದೆ. ಇದೇ ರೀತಿ ಸೋಂಕು ಹೆಚ್ಚಿದರೆ ಪಾಸಿಟಿವಿಟಿ ದರ ಶೇ.5ರ ಗಡಿ ದಾಟಬಹುದು ಎನ್ನಲಾಗುತ್ತಿದೆ.
40,134 ಕೇಸ್, 422 ಬಲಿ:
ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಅಂಕಿ-ಅಂಶಗಳ ಪ್ರಕಾರ, ಸೋಮವಾರ 40134 ಮಂದಿಯಲ್ಲಿ ಹೊಸದಾಗಿ ಸೋಂಕು ಕಾಣಿಸಿಕೊಂಡಿದೆ. 422 ಮಂದಿ ಸಾವಿಗೀಡಾಗಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ 2766ರಷ್ಟುಹೆಚ್ಚಾಗಿ 4,13,718ಕ್ಕೆ ತಲುಪಿದೆ. ಕೇರಳದಲ್ಲಿ 20728, ಮಹಾರಾಷ್ಟ್ರದಲ್ಲಿ 6479, ಆಂಧ್ರದಲ್ಲಿ 2287, ತಮಿಳುನಾಡಿನಲ್ಲಿ 1990, ಕರ್ನಾಟಕದಲ್ಲಿ 1875 ಪ್ರಕರಣ ವರದಿಯಾಗಿವೆ. 422 ಸಾವುಗಳ ಪೈಕಿ ಮಹಾರಾಷ್ಟ್ರದಲ್ಲಿ 157, ಒಡಿಶಾದಲ್ಲಿ 64, ಕೇರಳದಲ್ಲಿ 56 ಸಾವು ಸಂಭವಿಸಿವೆ.
3ನೇ ಅಲೆ ಊಹೆಗೆ ಕಾರಣ ಏನು?
1. ಸತತ 6ನೇ ದಿನ 40000+ ಕೇಸ್, ಪಾಸಿಟಿವಿಟಿ ದರ ಏರಿಕೆ
2. ಕಳೆದ ವಾರಕ್ಕಿಂತ ಈ ವಾರ 9 ಸಾವಿರ ಅಧಿಕ ಸೋಂಕಿತರು ಪತ್ತೆ
3. ಶೇ.1 ದಾಟಿದ ಆರ್-ಕೌಂಟ್: ಹೀಗಾಗಿ ಪ್ರಸರಣ ವೇಗ ಏರಿಕೆ


Share this Story:

Follow Webdunia kannada

ಮುಂದಿನ ಸುದ್ದಿ

ಬಿಎಸ್ವೈಗೆ ಸಚಿವ ಸ್ಥಾನಾಕಾಂಕ್ಷಿಗಳ ದುಂಬಾಲು : ಶಾಸಕರ ಲಾಬಿ