ಕೋಲಾರ : ಅಕಾಲಿಕ ಮಳೆಯಿಂದ ಅಪಾರ ಆಸ್ತಿಪಾಸ್ತಿ, ಬೆಳೆ ನಷ್ಟಕ್ಕೊಳಗಾಗಿರುವ ಜಿಲ್ಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೋಮವಾರ ಬೆಳೆ ಹಾನಿ ಪರಿಶೀಲಿಸಿದರು.
ರೈತರ ಜಮೀನುಗಳಿಗೆ ತೆರಳಿ ಪರಿಶೀಲನೆ ನಡೆಸಿದ ಅವರು ಮಳೆಯಿಂದಾಗಿ ತುಂಬಿದ, ಕಟ್ಟೆಯೊಡೆದ ಕೆರೆಗಳನ್ನೂ ವೀಕ್ಷಿಸಿದರು. ಈ ಸಂದರ್ಭದಲ್ಲಿ ಮಾತನಾಡಿ, ಹಾಳಾದ ಕೆರೆ ಏರಿ ದುರಸ್ತಿಗೆ ತಕ್ಷಣ ಕ್ರಮ ಕೈಗೊಳ್ಳಲಾಗುವುದು, ಮನೆಗಳಿಗೆ ನೀರು ನುಗ್ಗಿದ್ದರೆ ತಕ್ಷಣ 10 ಸಾವಿರ ರುಪಾಯಿ ಪರಿಹಾರ ಬಿಡುಗಡೆ ಮಾಡಲಾಗುವುದು ಎಂದರು. ಮಳೆಯಿಂದಾಗಿ ತೀವ್ರ ಹಾನಿಗೊಳಗಾಗಿರುವ ಚಿಕ್ಕಬಳ್ಳಾಪುರ ಜಿಲ್ಲೆಗೆ ಭಾನುವಾರ ಭೇಟಿ ನೀಡಿದ್ದ ಮುಖ್ಯಮಂತ್ರಿ ಬೊಮ್ಮಾಯಿ ಈಗ ಕೋಲಾರ ತಾಲೂಕಿನ ನರಸಾಪುರ ಸುತ್ತಮುತ್ತ ಹಾಗೂ ಮುದುವಾಡಿ ಸಮೀಪ ಪರಿಶೀಲನೆ ನಡೆಸಿದರು.
ರೈತರ ಹೊಲಕ್ಕೆ ಬಳಿ ತೆರಳಿ ಹಾನಿ ಕುರಿತು ಮಾಹಿತಿ ವಿವರಣೆ ಪಡೆದುಕೊಂಡ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೆರೆ ಏರಿ ದುರಸ್ತಿ, ಕಡಿತಗೊಂಡ ವಿದ್ಯುತ್ ದುರಸ್ತಿಗೆ ಸಂಬಂಧಿಸಿ ಅಗತ್ಯ ಕ್ರಮಕೈಗೊಳ್ಳುವಂತೆ ಸಂಬಂಧ ಪಟ್ಟ ಅಧಿಕಾರಿಗಳಿಗೆ ಸೂಚಿಸಿದರು. ಮಳೆ ಹಾನಿ ಪ್ರದೇಶಗಳ ಸಂಪೂರ್ಣ ವೀಕ್ಷಣೆ ಬಳಿಕ ಪರಿಹಾರ ಮೊತ್ತದ ಬಗ್ಗೆ ತಿಳಿಸಿ ಭರವಸೆ ನೀಡಿದರು.