ಕೊರೊನಾ ಮೂರನೆ ಅಲೆಯ ಆತಂಕ ಇರುವ ಹಿನ್ನೆಲೆಯಲ್ಲಿ ಸೋಂಕಿನ ಅಪಾಯವನ್ನು ತಗ್ಗಿಸುವ ಸಲುವಾಗಿ ಸುಪ್ರಸಿದ್ಧ ಪ್ರವಾಸಿ ತಾಣಗಳನ್ನು ಹೊಂದಿರುವ ರಾಜ್ಯಗಳಿಗೆ ಸಾಕಷ್ಟು ಮುನ್ನಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ನಿರ್ದೇಶನ ನೀಡಲಾಗಿದೆ.
ದೇಶದಲ್ಲಿ ಕೊರೊನಾ ಮೂರನೇ ಅಲೆಯ ಆತಂಕ ಇನ್ನೂ ಜೀವಂತವಾಗಿ ಇರೋದ್ರಿಂದ ಮಹಾಮಾರಿಯಿಂದ ಪಾರಾಗಲು ಇದು ನಿರ್ಣಾಯಕ ಘಟ್ಟವಾಗಿದೆ. ಹೀಗಾಗಿ ಪ್ರವಾಸಿಗರು, ಸ್ಥಳೀಯರು ಹಾಗೂ ಅಧಿಕಾರಿಗಳು ಜವಾಬ್ದಾರಿಯುತವಾಗಿ ವರ್ತಿಸಿದ್ದಲ್ಲಿ ಮಾತ್ರ ಈ ದೇಶವು ಕೊರೊನಾ ಮೂರನೇ ಅಲೆಯ ಅಪಾಯದಿಂದ ದೂರ ಸರಿಯಲಿದೆ ಎಂದು ಐಸಿಎಂಆರ್ ಹೇಳಿದೆ.
ಬಲರಾಮ ಭಾರ್ಗವ್ ಹಾಗೂ ಡಾ. ಸಮೀರ್ ಪಾಂಡಾ ಸೇರಿದಂತೆ ಐಸಿಎಂಆರ್ನ ಉನ್ನತ ವಿಜ್ಞಾನಿಗಳನ್ನೊಳಗೊಂಡ ತಂಡವು ನಡೆಸಿದ ಅಧ್ಯಯನದ ಪ್ರಕಾರ ರಜಾ ದಿನಗಳಲ್ಲಿ ಕೊರೊನಾ ಮೂರನೇ ಅಲೆಯ ಸಂಭವವು 47 ಪ್ರತಿಶತದಷ್ಟು ಹೆಚ್ಚಾಗಲಿದೆ. ಮಾತ್ರವಲ್ಲದೇ ಎರಡು ವಾರ ಮುಂಚಿತವಾಗಿಯೇ ಮೂರನೆ ಅಲೆಯ ಆರ್ಭಟ ಶುರುವಾಗಿಬಿಡಬಹುದು ಎಂದು ತಿಳಿದುಬಂದಿದೆ.
ಹೀಗಾಗಿ ಒಣ ಕೆಮ್ಮು, ವಾಸನೆ ಕಳೆದುಕೊಳ್ಳವುದು, ರುಚಿ ಗ್ರಹಿಕೆ ಇಲ್ಲದೇ ಇರುವುದು ಈ ರೀತಿಯ ಲಕ್ಷಣ ಕಂಡುಬಂದಲ್ಲಿ ಯಾವುದೇ ಕಾರಣಕ್ಕೂ ಪ್ರಯಾಣ ಮಾಡದಂತೆ ಐಸಿಎಂಆರ್ ಸೂಚಿಸಿದೆ.
ಪ್ರತಿಯೊಂದು ರಾಜ್ಯಗಳಲ್ಲಿ ಪ್ರವಾಸಿಗರಿಗೆ ಕೊರೊನಾ ಲಸಿಕೆ ಪ್ರಮಾಣ ಪತ್ರವನ್ನು ಕಡ್ಡಾಯಗೊಳಿಸಬೇಕು. ಹಾಗೂ ಇತ್ತೀಚಿನ ಕೊರೊನಾ ನೆಗೆಟಿವ್ ಪ್ರಮಾಣ ಪತ್ರಗಳನ್ನೂ ಒದಗಿಸುವಂತೆ ಪ್ರವಾಸಿಗರಿಗೆ ಸೂಚನೆಯನ್ನು ನೀಡಬೇಕು ಎಂದು ಹೇಳಿದೆ.
ಪ್ರವಾಸಿ ತಾಣಗಳಿಗೆ ಭೇಟಿ ನೀಡುವವರು ತಮ್ಮನ್ನು ಸಂಪರ್ಕಿಸುವ ಮಾಹಿತಿಯನ್ನು ನೋಂದಣಿ ಮಾಡಬೇಕು. ಆಗ ಸೋಂಕನ್ನು ಪತ್ತೆ ಮಾಡುವುದು ಹೆಚ್ಚು ಸುಲಭವಾಗಲಿದೆ. ಪ್ರವಾಸಿಗರಿಗೆ ಕೊರೊನಾ ಮಾರ್ಗಸೂಚಿ ಪಾಲನೆ, ಮಾಸ್ಕ್ ಹಾಗೂ ಸಾಮಾಜಿಕ ಅಂತರ ಕಾಪಾಡುವುದು ಕಡ್ಡಾಯವಾಗಿರಬೇಕು ಎಂದು ಹೇಳಿದೆ.
ಕಡಿಮೆ ಜನಸಂಖ್ಯೆಯನ್ನು ಹೊಂದಿರುವ ಸಣ್ಣ ರಾಜ್ಯಗಳಲ್ಲಿ ಸೋಂಕು ಕಡಿಮೆ ಪ್ರಮಾಣದಲ್ಲಿ ಹರಡಿತ್ತು. ಮಾತ್ರವಲ್ಲದೇ ಕೊರೊನಾ 2ನೇ ಅಲೆಯು ತಡವಾಗಿ ಇಂತಹ ರಾಜ್ಯಗಳಲ್ಲಿ ಬಾಧಿಸಿತ್ತು.
ಈ ಸಣ್ಣ ರಾಜ್ಯಗಳ ಪೈಕಿ ಹಿಮಾಚಲ ಪ್ರದೇಶ ಹಾಗೂ ಆಸ್ಸಾಂನಲ್ಲಿ ಇದೀಗ ಪ್ರವಾಸಿಗರ ಸಂಖ್ಯೆ ಮಿತಿ ಮೀರಿದೆ. ಉದಾಹರಣೆಗೆ ಮನಾಲಿಯಲ್ಲಿ ಸಧ್ಯ ಪ್ರವಾಸಿಗರು ಕಿಕ್ಕಿರಿದಿದ್ದರು. ಅದೇ ರೀತಿ ಪಶ್ಚಿಮ ಬಂಗಾಳದ ದಾರ್ಜೆಲಿಂಗ್ನಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿತ್ತು. ಇವೆಲ್ಲವೂ ನಿಜಕ್ಕೂ ಅಪಾಯಕಾರಿ ವಿಚಾರವಾಗಿದೆ ಎಂದು ಕಳವಳ ವ್ಯಕ್ತಪಡಿಸಿದೆ. ರಜಾ ದಿನಗಳಲ್ಲಿ ಸಣ್ಣ ರಾಜ್ಯಗಳಲ್ಲಿ ಜನಸಂಖ್ಯೆ ಪ್ರಮಾಣವು 40 ಪ್ರತಿಶತ ಅಧಿಕವಾಗಿರುತ್ತದೆ ಎಂದು ಹೇಳಿದೆ.