ನವದೆಹಲಿ(ಆ.03): ನಾನು ಆಂಧ್ರಪ್ರದೇಶ ಮತ್ತು ತೆಲಂಗಾಣ ಎರಡೂ ರಾಜ್ಯಗಳಿಗೆ ಸೇರಿದ ವ್ಯಕ್ತಿಯಾದ ಕಾರಣ, ಕೃಷ್ಣಾ ನದಿಗೆ ಸಂಬಂಧಿಸಿದಂತೆ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸುವುದಿಲ್ಲ ಎಂದು ಸುಪ್ರೀಂಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಹೇಳಿದ್ದಾರೆ.
* ನಾನು ಆಂಧ್ರಪ್ರದೇಶ ಮತ್ತು ತೆಲಂಗಾಣ ಎರಡೂ ರಾಜ್ಯಗಳಿಗೆ ಸೇರಿದ ವ್ಯಕ್ತಿ
* ಕೃಷ್ಣಾ ನದಿಗೆ ಸಂಬಂಧಿಸಿದಂತೆ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸುವುದಿಲ್ಲ
* ಸುಪ್ರೀಂಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ
ನದಿ ನೀರು ಹಂಚಿಕೆ ಸಂಬಂಧ ಆಂಧ್ರ ಸಲ್ಲಿಸಿರುವ ಅರ್ಜಿ ಕುರಿತು ಪ್ರತಿಕ್ರಿಯಿಸಿದ ಅವರು, ನಾನು ಈ ಪ್ರಕರಣದ ವಿಚಾರಣೆ ನಡೆಸುವುದಿಲ್ಲ. ನಾನು ಎರಡು ರಾಜ್ಯಗಳಿಗೂ ಸೇರಿದವನು. ಕೇಂದ್ರದ ಮಧ್ಯಸ್ಥಿಕೆಯಲ್ಲಿ ಈ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ಸಾಧ್ಯವಿದ್ದರೆ ಬಗೆಹರಿಸಿಕೊಳ್ಳಿ, ಆಗದಿದ್ದಲ್ಲಿ ಈ ಪ್ರಕರಣವನ್ನು ಬೇರೊಂದು ಪೀಠಕ್ಕೆ ವರ್ಗಾಯಿಸುತ್ತೇನೆ ಎಂದು ಅವರು ಹೇಳಿದರು.
ಕೃಷ್ಣಾ ಮತ್ತು ಗೋದಾವರಿ ನದಿಗಳು ಆಂಧ್ರ ಹಾಗೂ ತೆಲಂಗಾಣ ಮೂಲಕ ಹರಿಯುತ್ತವೆ. ಆಂಧ್ರಪ್ರದೇಶ ವಿಭಜನೆ ಆದಾಗಿನಿಂದಲೂ ಈ ನದಿಗಳ ನೀರು ಹಂಚಿಕೆ ವಿಚಾರದಲ್ಲಿ ಪದೇಪದೆ ಘರ್ಷಣೆ ಆಗುತ್ತಲೇ ಇದೆ. ಈಗ ಎರಡೂ ರಾಜ್ಯಗಳ ಗಡಿಯಲ್ಲಿರುವ ಶ್ರೀಶೈಲ ಅಣೆಕಟ್ಟಿಗೆ ಸಂಬಂಧಪಟ್ಟ ವಿಚಾರದಲ್ಲಿ ವಿವಾದ ಎದ್ದಿದೆ.
ಕೃಷ್ಣಾ ನದಿಗೆ ಒಟ್ಟು ಆರು ಅಣೆಕಟ್ಟು ಕಟ್ಟಲಾಗಿದೆ. ಈ ನದಿ ನೀರು ಹಂಚಿಕೆ ತೆಲಂಗಾಣ ಮತ್ತು ಆಂಧ್ರಪ್ರದೇಶಕ್ಕೆ 34:66 ಪ್ರಮಾಣದಲ್ಲಿ ಇರಬೇಕು ಎಂದು ತಾತ್ಕಾಲಿಕ ಒಪ್ಪಂದ ಹೇಳುತ್ತದೆ. ಅಂದರೆ ತೆಲಂಗಾಣಕ್ಕೆ 299 ಟಿಎಂಸಿ ನೀರು ಹಾಗೂ ಆಂಧ್ರಪ್ರದೇಶಕ್ಕೆ 512 ಟಿಎಂಸಿ ನೀರು ಸೇರಬೇಕು. ಆದರೆ ಈ ಅನುಪಾತವನ್ನು ಮೀರಿ ತೆಲಂಗಾಣ ನೀರು ಪಡೆಯುತ್ತದೆ ಎಂಬುದು ಆಂಧ್ರದ ಆರೋಪ.