ಬೆಂಗಳೂರು (ಆ.03): ನೂತನ ಸರ್ಕಾರದ ಸಚಿವ ಸಂಪುಟ ರಚನೆಯ ಕುರಿತು ಸಂಪೂರ್ಣ ಮಾಹಿತಿಯನ್ನು ಪಕ್ಷದ ಹೈಕಮಾಂಡ್ ಇಂದು ರಾತ್ರಿ ವೇಳೆಗೆ ನೀಡಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
•ನೂತನ ಸರ್ಕಾರದ ಸಚಿವ ಸಂಪುಟ ರಚನೆಯ ಕುರಿತು ಸಂಪೂರ್ಣ ಮಾಹಿತಿ
•ಮಂಗಳವಾರ ರಾತ್ರಿ ವೇಳೆಗೆ ನೀಡಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಸೋಮವಾರ ರಾತ್ರಿ ದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿಯಾಗಿ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಸಚಿವ ಸಂಪುಟ ರಚನೆ ಕುರಿತು ಬೊಮ್ಮಾಯಿ ವಿಸ್ತೃತವಾಗಿ ಚರ್ಚೆ ನಡೆಸಿದರು.
ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ಒಟ್ಟಾರೆ ಪಟ್ಟಿಯ ಬಗ್ಗೆ ಸಮಾಲೋಚನೆ ಮಾಡಲಾಗಿದೆ. ಸಚಿವ ಸಂಪುಟದಲ್ಲಿ ಎಷ್ಟುಮಂದಿ ಸಚಿವರಾಗಬೇಕು ಮತ್ತು ಎಷ್ಟುಮಂದಿಯ ಸಂಪುಟ ಇರಬೇಕು ಎಂಬುದರ ಬಗ್ಗೆ ಹೈಕಮಾಂಡ್ ಮಾಹಿತಿ ನೀಡಲಿದೆ. ಮಂಗಳವಾರ ರಾತ್ರಿಯ ವೇಳೆ ಹೈಕಮಾಂಡ್ ಸಂಪೂರ್ಣವಾದ ಮಾಹಿತಿ ನೀಡಲಿದೆ. ಎಲ್ಲಾ ವಿಚಾರಗಳಿಗೆ ಸಂಬಂಧಪಟ್ಟಂತೆ ಅಳೆದು ತೂಗಿ ರಾಷ್ಟ್ರೀಯ ಅಧ್ಯಕ್ಷರೇ ಎಲ್ಲವನ್ನು ಪ್ರಕಟಿಸಲಿದ್ದಾರೆ ಎಂದರು.
ತದನಂತರ ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಜತೆ ಕುಳಿತು ಯಾವ ದಿನ ಪ್ರಮಾಣ ವಚನ ಕಾರ್ಯಕ್ರಮ ನಿಗದಿಗೊಳಿಸಬೇಕು ಎಂಬುದರ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದರು.
ನಾವು ಬೇರೆ ಬೇರೆ ವಿಂಗಡಣೆ ಮಾಡಿರುವ 2-3 ಪಟ್ಟಿಯನ್ನು ನೀಡಿದ್ದೇವೆ. ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿಬಗ್ಗೆಯೂ ಹೈಕಮಾಂಡ್ ತೀರ್ಮಾನ ಮಾಡಲಿದೆ. ಪ್ರಾದೇಶಿಕತೆ, ಸಮುದಾಯ ಸೇರಿದಂತೆ ಎಲ್ಲವನ್ನೂ ಪರಿಗಣಿಸಿ ಸಚಿವ ಸಂಪುಟ ಪಟ್ಟಿಬಿಡುಗಡೆ ಮಾಡಲಾಗುತ್ತದೆ. ನಳಿನ್ ಕುಮಾರ್ ಕಟೀಲ್ ಸೇರಿದಂತೆ ಎಲ್ಲರ ಅಭಿಪ್ರಾಯ ಪಡೆದೇ ಸಮಾಲೋಚನೆ ನಡೆಸಲಾಗಿದೆ. ಪಕ್ಷದಲ್ಲಿ ಯಾರೂ ವಲಸಿಗರಲ್ಲ, ಎಲ್ಲರೂ ಬಿಜೆಪಿಯವರೇ ಆಗಿದ್ದಾರೆ ಎಂದರು