ಬೆಂಗಳೂರು(ಅ.07) : ರಾಜ್ಯದಲ್ಲಿ ವರುಣನ ಆರ್ಭಟ ಕಡಿಮೆಯಾಗುವ ಯಾವ ಲಕ್ಷಣಗಳು ಕಾಣಿಸುತ್ತಿಲ್ಲ. ಕಳೆದ ಒಂದು ತಿಂಗಳಿಂದ ರಾಜ್ಯದಲ್ಲಿ ಭರ್ಜರಿ ಮಳೆಯಾಗುತ್ತಿದ್ದು , ಮುಂದಿನ ದಿನಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿತ್ತು.
ಆದರೆ ರಾಜ್ಯದಲ್ಲಿ ಮುಂದಿನ ಕೆಲ ದಿನಗಳ ಕಾಲ ಭರ್ಜರಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮಳೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ನೈರುತ್ಯ ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತದಿಂದ ತಮಿಳುನಾಡು ಮತ್ತು ಕೇರಳದಾದ್ಯಂತ ಆಗ್ನೇಯ ಅರಬ್ಬಿ ಸಮುದ್ರದವರೆಗೆ ಮುಂಗಾರು ವಿಸ್ತರಿಸಿದ್ದು, ಇದು ಭಾರೀ ಮಳೆಗೆ ಕಾರಣವಾಗಿದೆ.
ಕರ್ನಾಟಕದಲ್ಲಿ ಮುಂಗಾರು ಅವಧಿಯಲ್ಲಿ 852 ಮಿ. ಮೀ. ಮಳೆಯಾಗಬೇಕಿತ್ತು. ಆದರೆ 787 ಮಿ. ಮೀ. ಮಳೆಯಾಗಿದೆ. ಈಗ ಮುಂಗಾರು ಅಂತ್ಯಗೊಂಡಿದ್ದರೂ ಚಂಡಮಾರುತದ ಪ್ರಭಾವದಿಂದ ರಾಜ್ಯದಲ್ಲಿ ಮಳೆಯಾಗುತ್ತಿದ್ದು, ಮುಂದಿನ 3 ದಿನಗಳ ಕಾಲ ಭಾರೀ ಮಳೆಯಾಗುವ ನಿರೀಕ್ಷೆ ಇದೆ.
ಯಾವ್ಯಾವ ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ?
ಅಲ್ಲದೇ ಇಂದು ಸಹ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಭಾರೀ ಮಳೆಯ ನಿರೀಕ್ಷೆ ಇದ್ದು ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಹಾಸನ, ಶಿವಮೊಗ್ಗ, ಚಿಕ್ಕಮಗಳೂರು, ಮೈಸೂರು, ಮಂಡ್ಯ, ಚಾಮರಾಜನಗರ ಮತ್ತು ಕೊಡಗು ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ ಎಂದು ಇಲಾಖೆ ತಿಳಿಸಿದೆ.
ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಅಧಿಕ ಮಳೆಯ ನಿರೀಕ್ಷೆ ಇರುವ ಕಾರಣ ಮುಂದಿನ 3 ದಿನ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ತುಮಕೂರು, ಕೋಲಾರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಬೀದರ್, ಕೊಪ್ಪಳ, ರಾಯಚೂರು, ಕಲಬುರಗಿ, ವಿಜಯಪುರ, ಧಾರವಾಡ, ಗದಗ ಜಿಲ್ಲೆಗಳಲ್ಲಿ ಇಂದು ಯೆಲ್ಲೋ ಅಲರ್ಟ್
ಬೆಂಗಳೂರಿನ ಹವಾಮಾನ ಹೇಗಿರಲಿದೆ?
ರಾಜಧಾನಿ ಬೆಂಗಳೂರು ಸಹ ನಿನ್ನೆ ಸುರಿದ ಮಳೆಗೆ ಮಲೆನಾಡಿನಂತಾಗಿತ್ತು. ನಿನ್ನೆ ನಗರದ ಹಲವು ಭಾಗಗಳಲ್ಲಿ ಭಾರಿ ಮಳೆಯಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿತ್ತು. ಅಕ್ಚೋಬರ್ 10ರವರೆಗೂ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಮಳೆ ಆರ್ಭಟ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.