Publish Date: Sun, 20 Aug 2023 (11:05 IST)
Updated Date: Sun, 20 Aug 2023 (11:24 IST)
ಬೆಂಗಳೂರು : ಚಂದ್ರಯಾನ-3 ಮಿಷನ್ ಕಾರ್ಯಾಚರಣೆ ನಿರ್ಣಾಯಕ ಹಂತದಲ್ಲಿದ್ದು, ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ ಕಾಲಿಡಲು ಇನ್ನೊಂದೇ ಹೆಜ್ಜೆ ಬಾಕಿಯಿದೆ.
ಭಾನುವಾರ (ಇಂದು) ಬೆಳಗ್ಗೆ ಅಂತಿಮ ಹಂತದ ಡಿಬೂಸ್ಟಿಂಗ್ ಕಾರ್ಯಾಚರಣೆಯೂ ಯಶಸ್ವಿಯಾಗಿ ಪೂರ್ಣಗೊಂಡಿದೆ. ಎಲ್ಲವೂ ಅಂದುಕೊಂಡಂತೆ ಆದ್ರೆ ಆಗಸ್ಟ್ 23 ರಂದು ಲ್ಯಾಂಡರ್ ವಿಕ್ರಮ್ ಚಂದ್ರನ ಅಂಗಳಕ್ಕೆ ಕಾಲಿಡಲಿದೆ.
ಆಗಸ್ಟ್ 18ರಂದು ವಿಕ್ರಮ್ ಲ್ಯಾಂಡರ್ ಡಿಬೂಸ್ಟಿಂಗ್ ಕಾರ್ಯಾಚರಣೆಯನ್ನ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಯಶಸ್ವಿಗೊಳಿಸಿತ್ತು. ಲ್ಯಾಂಡರ್ ಮಾಡ್ಯೂಲ್ ತನ್ನ ಕಕ್ಷೆಯನ್ನ 113 ಕಿಮೀ x 157 ಕಿಮೀಗೆ ಇಳಿಸಿದ ಡಿಬೂಸ್ಟಿಂಗ್ ಕಾರ್ಯಾಚರಣೆಗೆ ಯಶಸ್ವಿಯಾಗಿ ಒಳಗಾಗಿತ್ತು.
ಹಾಗೆಯೇ 2ನೇ ಹಾಗೂ ಅಂತಿಮ ಹಂತದ ಡಿಬೂಸ್ಟಿಂಗ್ ಕಾರ್ಯಾಚರಣೆ ಯಶಸ್ವಿಯಾಗಿ ಪೂರ್ಣಗೊಂಡಿದ್ದು, ಲ್ಯಾಂಡರ್ ಮಾಡ್ಯೂಲ್ ಅನ್ನು ಕಕ್ಷೆಯನ್ನು 25 ಕಿಮೀ x 134 ಕಿಮೀಗೆ ಇಳಿಸಿದೆ.