Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಬಿಜೆಪಿ ರಾಜ್ಯ ನಾಯಕರ ವಿರುದ್ಧ ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಅಸಮಾಧಾನ ಹೊರಗೆ ಹಾಕಿದ್ದಾರೆ. ಪಕ್ಷದಲ್ಲಿನ ಇತ್ತೀಚಿನ ಬೆಳವಣಿಗೆಗಳಿಂದ ನೋವಾಗಿದೆ. ಜಿಲ್ಲಾ ಬಿಜೆಪಿ ಮುಖಂಡರ ಗಮನಕ್ಕೆ ಬಾರದಂತೆ, ನಮ್ಮ ಜೊತೆ ಚರ್ಚೆ ಮಾಡದೇ ನಮಗೆ ಮಾಹಿತಿಯೂ ಕೊಡದೇ ಯಾರ ಯಾರನ್ನೋ ಪಕ್ಷಕ್ಕೆ ಸೇರಿಸಿಕೊಳ್ಳುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮಾಧ್ಯಮದವರೊಂದಿಗೆ ಮಾತನಾಡಿದ ಅಪ್ಪಾಸಾಹೇಬ್ ಪಟ್ಟಣಶೆಟ್ಟಿ, ಕೇಂದ್ರ ಮಾಜಿ ಸಚಿವ ಹಾಗೂ ಹಾಲಿ ವಿಧಾನ ಪರಿಷತ್ ಸದಸ್ಯ ಬಸನಗೌಡ ಪಾಟೀಲ ಯತ್ನಾಳ ಪಕ್ಷ ಸೇರ್ಪಡೆ ವಿಷಯ ನನ್ನ ಗಮನಕ್ಕೆ ಬಂದಿಲ್ಲ. ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಪಕ್ಷ ಸೇರಿದ್ದನ್ನು ನಾನು ಮಾಧ್ಯಮದ ಮೂಲಕ ತಿಳಿದುಕೊಳ್ಳುವಂತಹ ಪರಿಸ್ಥಿತಿ ತಲೆ ದೋರಿದೆ.
ಯತ್ನಾಳ ಪಕ್ಷ ಸೇರ್ಪಡೆ ಕುರಿತು ನನಗೆ ಮಾಹಿತಿ ಇಲ್ಲ. ಯತ್ನಾಳ ಬಿಜೆಪಿಗೆ ಬಂದರೂ ನಾನು ಪಕ್ಷ ಬಿಡುವದಿಲ್ಲ. ನಾನು ಯಾವುದೇ ಕಾರಣಕ್ಕೂ ಪಕ್ಷ ಬಿಡುವದಿಲ್ಲ. ಒಂದು ವೇಳೆ ಯತ್ನಾಳ ಸೇರ್ಪಡೆಗೊಂಡರೆ ಬಳಿಕ ಮಾಧ್ಯಮದವರನ್ನು ಕರೆದು ಮುಂದಿನ ನಡೆ ಕುರಿತು ಅಭಿಪ್ರಾಯ ತಿಳಿಸುತ್ತೇನೆ. ಅವರನ್ನು ಸೇರಿಸಿಕೊಳ್ಳುವ ಮುಂಚೆ ಜಿಲ್ಲಾ ನಾಯಕರ ಜೊತೆ ಚರ್ಚಿಸಿ ನಿರ್ಣಯ ಕೈಗೊಳ್ಳಬೇಕು ಎಂದು ಹೇಳಿ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.