ಮುಂಬಯಿ : ನ್ಯೂಯಾರ್ಕ್ ನಗರದಿಂದ ಮರಳಿದ್ದ 29 ವರ್ಷದ ವ್ಯಕ್ತಿಯಲ್ಲಿ ಓಮಿಕ್ರಾನ್ ತಳಿ ಕೊರೊನಾ ವೈರಸ್ ಇರುವುದು ಶುಕ್ರವಾರ ದೃಢಪಟ್ಟಿದೆ ಎಂದು ಬೃಹನ್ ಮುಂಬಯಿ ಮಹಾನಗರ ಪಾಲಿಕೆ (ಬಿಂಎಸಿ) ತಿಳಿಸಿದೆ.
ಅನೇಕ ಓಮಿಕ್ರಾನ್ ಕೋವಿಡ್ 19 ಪ್ರಕರಣಗಳಂತೆ ಈ ವ್ಯಕ್ತಿಯಲ್ಲಿ ಯಾವುದೇ ಸೋಂಕಿನ ಲಕ್ಷಣಗಳಿಲ್ಲ. ಈ ವ್ಯಕ್ತಿ ಅಮೆರಿಕದಲ್ಲಿ ಫೈಜರ್ ಲಸಿಕೆಯ ಮೂರು ಡೋಸ್ಗಳನ್ನು ಪಡೆದಿದ್ದರು ಎಂದು ಅದು ಹೇಳಿದೆ.
ಡಿಸೆಂಬರ್ 9ರಂದು ಮುಂಬಯಿ ವಿಮಾನ ನಿಲ್ದಾಣಕ್ಕೆ ಅಮೆರಿಕದಿಂದ ಬಂದಿದ್ದ ಅವರನ್ನು ಪರೀಕ್ಷೆಗೆ ಒಳಪಡಿಸಿದಾಗ ಕೋವಿಡ್ 19 ಪಾಸಿಟಿವ್ ಪತ್ತೆಯಾಗಿತ್ತು.
ರೋಗಿಯನ್ನು ಮುಂಜಾಗ್ರತಾ ಕ್ರಮವಾಗಿ ಆಸ್ಪತ್ರೆಯೊಂದಕ್ಕೆ ದಾಖಲು ಮಾಡಲಾಗಿದೆ. ಅವರಲ್ಲಿ ಯಾವುದೇ ರೋಗ ಲಕ್ಷಣಗಳಿಲ್ಲ ಎಂದು
BMC ಹೇಳಿಕೆಯಲ್ಲಿ ತಿಳಿಸಿದೆ. ಇದರಿಂದ ದೇಶದ ವಾಣಿಜ್ಯ ನಗರಿಯಲ್ಲಿನ ಓಮಿಕ್ರಾನ್ ಪ್ರಕರಣಗಳ ಸಂಖ್ಯೆ 15ಕ್ಕೆ ಏರಿಕೆಯಾಗಿದೆ.
ಇವರಲ್ಲಿ ಐವರು ಮುಂಬಯಿ ಹೊರವಲಯದವರು. ಈ ಪೈಕಿ 13 ಮಂದಿ ಈಗಾಗಲೇ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ಈ 15 ಮಂದಿಯಲ್ಲಿ ಯಾರೊಬ್ಬರಲ್ಲಿಯೂ ಗಂಭೀರ ಲಕ್ಷಣಗಳು ಕಂಡುಬಂದಿರಲಿಲ್ಲ ಎಂದು ಬಿಎಂಸಿ ತಿಳಿಸಿದೆ.