ಆನೇಕಲ್ : ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿನ ಫ್ಲೈಓವರ್ಗಳು ದಿನೇ ದಿನೇ ಒಂದೊಂದಾಗಿಯೇ ಹದಗೆಡುತ್ತಿದ್ದು, ಮಹಾ ದುರಂತಕ್ಕೆ ಸಾಕ್ಷಿಯಾಗಲಿದೆಯಾ ಎನ್ನುವಂತೆ ಪ್ರಶ್ನೆ ಮೂಡಿದೆ.
ಪ್ರತಿಷ್ಠಿತ ಎಲೆಕ್ಟ್ರಾನಿಕ್ ಸಿಟಿಯ ಎಲಿವೇಟೆಡ್ ಫ್ಲೈಓವರ್ ನ ಮಧ್ಯೆ ಭಾಗದಲ್ಲಿನ ಲೇಬೇ ಬಳಿ ತಡೆಗೋಡೆ ಬಿರುಕು ಬಿಟ್ಟು ತಿಂಗಳುಗಳೇ ಕಳೆದರು ಅದನ್ನು ಸರಿಪಡಿಸದೆ ತ್ಯಾಪೆ ಹಚ್ಚುವ ಕೆಲಸ ಮಾಡಿ ಬಿಇಟಿಪಿಎಲ್ ಅಧಿಕಾರಿಗಳು ಬೇಜವಾಬ್ದಾರಿ ತೋರಿಸಿದ್ದಾರೆ. ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.
ಎಲೆಕ್ಟ್ರಾನಿಕ್ ಸಿಟಿಯಿಂದ ಸಿಲ್ಕ್ ಬೋರ್ಡ್ವರೆಗೆ ಈ ಫ್ಲೈಓವರ್ ಇದ್ದು, ಸುಮಾರು ಕಿಲೋಮೀಟರ್ ಉದ್ದದ ಫ್ಲೈಓವರ್ ಇದಾಗಿದೆ. ಪ್ರತಿನಿತ್ಯ ಸಾವಿರಾರು ವಾಹನಗಳು ಎಲಿವೇಟೆಡ್ ಫ್ಲೈಓವರ್ ಮೇಲೆ ಹಣ ಪಾವತಿಸಿ ಸಂಚರಿಸುತ್ತಿದ್ದು, ಕೋಟ್ಯಾಂತರ ರೂಪಾಯಿ ಆದಾಯ ಬರುತ್ತಿದೆ.
ಕಳೆದ ಕೆಲ ತಿಂಗಳುಗಳ ಹಿಂದೆ ಲೇಬೇ ಬಳಿ ಇದ್ದ ದ್ವಿಚಕ್ರ ವಾಹನ ಸವಾರರಿಗೆ ಕಾರೊಂದು ಡಿಕ್ಕಿಯಾಗಿ ಫ್ಲೈಓವರ್ ಮೇಲಿಂದ ಬಿದ್ದು ಯುವಕ, ಯುವತಿ ಸಾವನ್ನಪ್ಪಿದ್ದರು.
ಆಗ ಬಿರುಕು ಬಿಟ್ಟಿದ್ದ ತಡೆಗೋಡೆಯನ್ನ ಸರಿಪಡಿಸಬೇಕಾದ ಬಿಇಟಿಪಿಎಲ್ ಅಧಿಕಾರಿಗಳು ಒಂದು ಬ್ಯಾರಿಕೇಡ್ ಅಡ್ಡಲಾಗಿ ಇಟ್ಟು ಕೈತೊಳೆದುಕೊಂಡಿದೆ. ಇದರಿಂದ ತಡೆಗೋಡೆ ಬೀಳುವ ಹಂತದಲ್ಲಿದ್ದು, ವಾಹನ ಸವಾರರು ಆತಂಕದಲ್ಲಿಯೇ ಸಂಚರಿಸುತ್ತ ಅಧಿಕಾರಿಗಳ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ. ಅಲ್ಲದೆ ಬೆಳಗ್ಗೆ ಸಮಯದಲ್ಲಿ ಲೇಬೇ ಬಳಿ ಸಂಚಾರಿ ಪೊಲೀಸರು ಅತಿವೇಗವಾಗಿ ಬರುವ ವಾಹನಗಳನ್ನ ತಡೆದು ದಂಡ ವಸೂಲಿ ಮಾಡುತ್ತಾರೆ.