ಕೊರೊನಾ ವೈರಸ್ ತವರು ಚೀನಾ. ಮಾರಣಾಂತಿಕ ವೈರಸ್ ಮೂಲಕ ವಿಶ್ವಾದ್ಯಂತ ಸಾವು-ನೋವು, ಆರ್ಥಿಕ ಕುಸಿತಕ್ಕೆ ಈ ಡ್ರ್ಯಾಗನ್ ರಾಷ್ಟ್ರವೇ ಕಾರಣ. ಆದರೆ ಆ ಜವಾಬ್ದಾರಿಯನ್ನೂ ಈವರೆಗೂ ಚೀನಾ ಹೊತ್ತುಕೊಂಡಿಲ್ಲ.
ಕೋವಿಡ್-19, ಡೆಲ್ಟಾ, ಓಮಿಕ್ರಾನ್ ಹೀಗೆ ಮೂರು ಅಲೆಗಳ ಮೂಲಕ ಇಡೀ ಜಗತ್ತನ್ನು ವೈರಸ್ ಹಿಂಡಿ ಹಿಪ್ಪೆ ಮಾಡಿತ್ತು. ಅದಾದ ಬಳಿಕ ಸ್ವಲ್ಪ ಚೇತರಿಕೆ ಕಾಣಿಸಿಕೊಳ್ಳುವ ಹೊತ್ತಿನಲ್ಲೇ ಈಗ ಮತ್ತೆ 4ನೇ ಅಲೆಯ ಭೀತಿ ಶುರುವಾಗಿದೆ.
ಹೌದು, ಚೀನಾದಲ್ಲಿ ಮತ್ತೆ ಕೊರೊನಾ ಹಾವಳಿ ಜೋರಾಗಿದೆ. ಕೊರೊನಾ ಉಪತಳಿಯು ಬಹು ವೇಗವಾಗಿ ದೇಶಾದ್ಯಂತ ಹರಡುತ್ತಿರುವುದು ವಿಶ್ವಮಟ್ಟದಲ್ಲಿ ಆತಂಕಕ್ಕೆ ಕಾರಣವಾಗಿದೆ.
ಬಿಎಫ್.7 ಉಪ ತಳಿ ಲಕ್ಷಣಗಳೇನು?
ಓಮಿಕ್ರಾನ್ ರೂಪಾಂತರದ BF.7 ಉಪ-ತಳಿ ಲಕ್ಷಣ ಕೊರೊನಾ ವೈರಸ್ ಸೋಂಕು ತಗುಲಿದ ವ್ಯಕ್ತಿಗಳಲ್ಲಿ ಸಾಮಾನ್ಯವಾಗಿ ಜ್ವರ, ಕೆಮ್ಮು, ಶ್ವಾಸಕೋಶ ಸಮಸ್ಯೆಗಳು ಪ್ರಾಥಮಿಕವಾಗಿ ಗೋಚರಿಸುತ್ತವೆ. ಅಂತೆಯೇ ಓಮಿಕ್ರಾನ್ ರೂಪಾಂತರದ ಬಿಎಫ್.7 ಉಪ-ತಳಿಯ ಲಕ್ಷಣಗಳೆಂದರೆ, ಜ್ವರ, ಗಂಟಲು ನೋವು, ಮೂಗು ಸ್ರವಿಸುವಿಕೆ, ಕೆಮ್ಮು, ಉಸಿರಾಟದ ಸಮಸ್ಯೆ.
ಮಧುಮೇಹಿಗಳಿಗೆ ಮಾಸ್ಕ್ ಕಡ್ಡಾಯ
ಕೋವಿಡ್–19 ಕುರಿತು ಆತಂಕಕ್ಕೆ ಒಳಗಾಗುವ ಅಗತ್ಯ ಇಲ್ಲ. ಮಧುಮೇಹ, ಅಧಿಕ ರಕ್ತದೊತ್ತಡ ಇರುವವರು (ಕೋಮಾರ್ಬಿಡಿಟಿ), ವಯಸ್ಸಾದವರು ಜನಜಂಗುಳಿ ಇರುವ ಸ್ಥಳಗಳಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂಬುದು ನೀತಿ ಆಯೋಗದ ಸದಸ್ಯ (ಆರೋಗ್ಯ) ಡಾ.ವಿ.ಕೆ.ಪೌಲ್ ಸಲಹೆಯಾಗಿದೆ.