ಬೆಂಗಳೂರು: ಲಾಕ್ ಡೌನ್ 4 ನಿಯಮ ಇಂದಿನಿಂದ ಜಾರಿಗೆ ಬರಲಿದ್ದು, ಈಗಾಗಲೇ ಕೇಂದ್ರ ಗೃಹಸಚಿವಾಲಯ ಕೆಲವೊಂದು ಸೂಚನೆ ನೀಡಿದ್ದು, ಮತ್ತೆ ಕೆಲವು ನಿರ್ಧಾರಗಳನ್ನು ಕೈಗೊಳ್ಳುವುದನ್ನು ಆಯಾ ರಾಜ್ಯ ಸರ್ಕಾರಗಳಿಗೆ ವಹಿಸಿದೆ.
ಅದರಲ್ಲಿ ಪ್ರಮುಖವಾಗಿರುವುದು ಬಸ್ ಸಂಚಾರ ಬೇಕೇ ಬೇಡವೇ ಎಂಬುದು. ಇಂದು ಈ ವಿಚಾರವಾಗಿ ಸಿಎಂ ಯಡಿಯೂರಪ್ಪ ಸಭೆ ನಡೆಸಲಿದ್ದು, ರಾಜ್ಯ, ಅಂತರಾಜ್ಯ ಬಸ್ ಸಂಚಾರ ಬೇಕೇ ಬೇಡವೇ ಎಂಬ ಬಗ್ಗೆ ತೀರ್ಮಾನ ಕೈಗೊಳ್ಳಲಿದ್ದಾರೆ.
ಪಕ್ಕದ ರಾಜ್ಯಗಳಲ್ಲಿ ಕೊರೋನಾ ಪರಿಸ್ಥಿತಿ ನೋಡಿದರೆ ಅಂತರಾಜ್ಯ ಬಸ್ ಸಂಚಾರಕ್ಕೆ ಅನುಮತಿ ಸಿಗುವುದು ಕಷ್ಟ. ಆದರೆ ರಾಜ್ಯದೊಳಗೇ ಬಸ್ ಸಂಚರಿಸಲು ಷರತ್ತುಬದ್ಧ ಒಪ್ಪಿಗೆ ನೀಡುವ ಸಾಧ‍್ಯತೆಯಿದೆ. ಇದರಿಂದ ಹಲವು ಕಾರ್ಮಿಕರಿಗೆ, ನೌಕರರಿಗೆ ತಮ್ಮ ಕೆಲಸಗಳಿಗೆ ಹೋಗಲು ಅನುಕೂಲವಾಗಲಿದೆ. ಹೀಗಾಗಿ ಸಿಎಂ ಇಂದು ಕೈಗೊಳ್ಳುವ ನಿರ್ಧಾರದ ಮೇಲೆ ಹಲವರ ಭವಿಷ್ಯ ಅಡಕವಾಗಿದೆ ಎನ್ನಬಹುದು.