ಬೆಂಗಳೂರು: ಸಮ್ಮಿಶ್ರ ಸರ್ಕಾರದ ಕೆಲವು ಕಾಂಗ್ರೆಸ್ ಶಾಸಕರನ್ನು ಬಿಜೆಪಿ ತನ್ನತ್ತ ಸೆಳೆಯಲು ಯತ್ನಿಸುತ್ತಿರುವ ಬೆನ್ನಲ್ಲೇ ಸಿಎಂ ಕುಮಾರಸ್ವಾಮಿ ಬಿಜೆಪಿಗೆ ತಿರುಗೇಟು ನೀಡಿದ್ದಾರೆ.
ಜಾರಕಿಹೊಳಿ ಸಹೋದರರು ಸೇರಿದಂತೆ ಕಾಂಗ್ರೆಸ್ ನ ಕೆಲವು ಶಾಸಕರನ್ನು ಬಿಜೆಪಿ ತನ್ನತ್ತ ಸೆಳೆಯಲು ಯತ್ನಿಸುತ್ತಿದೆ ಎಂಬ ಸುದ್ದಿಗಳ ಬೆನ್ನಲ್ಲೇ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಸಿಎಂ ಕುಮಾರಸ್ವಾಮಿ ನಮಗೂ ತಿರುಗೇಟು ಕೊಡಲು ಗೊತ್ತು. ಬಿಜೆಪಿಯ ಐವರು ಶಾಸಕರಿಂದ ರಾಜೀನಾಮೆ ಕೊಡಿಸಿದರೆ ಅವರ ಪರಿಸ್ಥಿತಿ ಏನಾಗುತ್ತದೆ ಗೊತ್ತಾ ಎಂದು ಕಿಡಿ ಕಾರಿದ್ದಾರೆ.
ಈ ನಡುವೆ ನಮ್ಮ ಶಾಸಕರು ಯಾರೂ ಬಿಜೆಪಿಗೆ ಹೋಗುತ್ತಿಲ್ಲ. ಇದೆಲ್ಲಾ ಮಾಧ್ಯಮಗಳ ಸೃಷ್ಟಿ ಅಷ್ಟೇ. ಸರ್ಕಾರ ಅತಂತ್ರವಾಗಿದೆ ಎಂದು ನಿಮಗೆ ಹೇಳಿದವರು ಯಾರು? ಎಂದು ಸಿಎಂ ಪ್ರಶ್ನಿಸಿದ್ದಾರೆ. ಅತ್ತ ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ಪ್ರಯತ್ನಿಸುತ್ತಿರುವ ಬೆನ್ನಲ್ಲೇ ಬಿಎಸ್ ಯಡಿಯೂರಪ್ಪ ವಿರುದ್ಧ ಕಾಂಗ್ರೆಸ್ ಶಾಸಕರಿಗೆ ಹಣದ ಆಮಿಷವೊಡ್ಡಿದ ಆರೋಪದಲ್ಲಿ ಎಸಿಬಿಗೆ ಕೇಸು ದಾಖಲಿಸಲು ಕಾಂಗ್ರೆಸ್-ಜೆಡಿಎಸ್ ಯೋಜನೆ ರೂಪಿಸಿದೆ. ಈ ಮೂಲಕ ಬಿಜೆಪಿಯ ಪ್ರಯತ್ನವನ್ನು ವಿಫಲಗೊಳಿಸಲು ಪ್ರತಿತಂತ್ರ ಹೂಡಿದೆ. ಅಂತೂ ಮತ್ತೆ ರಾಜ್ಯ ರೆಸಾರ್ಟ್ ರಾಜಕೀಯದತ್ತ ಹೊರಳುವ ಸೂಚನೆ ಕಂಡುಬರುತ್ತಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.