Publish Date: Fri, 27 Jan 2023 (11:51 IST)
Updated Date: Fri, 27 Jan 2023 (11:56 IST)
ನವದೆಹಲಿ : ಕೇಂದ್ರ ಬಜೆಟ್ ಸಿದ್ಧತೆ ಅಂತಿಮ ಹಂತಕ್ಕೆ ಬಂದಿದ್ದು, ದೆಹಲಿಯ ನಾರ್ಥ್ ಬ್ಲಾಕ್ನಲ್ಲಿರುವ ಹಣಕಾಸು ಸಚಿವಾಲಯದ ಮುಖ್ಯ ಕಚೇರಿಯಲ್ಲಿ ಸಿಬ್ಬಂದಿಗೆ ಹಲ್ವಾ ಹಂಚಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸಂಭ್ರಮಿಸಿದ್ದಾರೆ.
ಫೆ.1 ರಂದು ಬಜೆಟ್ ಮಂಡನೆಯಾಗಲಿರುವ ಹಿನ್ನೆಲೆಯಲ್ಲಿ ಸಿಬ್ಬಂದಿಗೆ ಹಲ್ವಾ ಹಂಚುವ ಮೂಲಕ ಅಂತಿಮ ಹಂತದ ಸಿದ್ಧತೆಗೆ ಚಾಲನೆ ನೀಡಲಾಯಿತು. ಈ ವೇಳೆ ಹಣಕಾಸು ಖಾತೆ ರಾಜ್ಯ ಸಚಿವರಾದ ಪಂಕಜ್ ಚೌಧರಿ ಮತ್ತು ಭಾಗವತ್ ಕಿಸನ್ರಾವ್ ಕರದ್ ಉಪಸ್ಥಿತರಿದ್ದರು.
ಬಜೆಟ್ನ ಸಿದ್ಧತೆಯನ್ನು ಗುಪ್ತವಾಗಿರಿಸುವ ಹಿನ್ನೆಲೆಯಲ್ಲಿ ಬಜೆಟ್ನಲ್ಲಿ ಸಿದ್ಧಪಡಿಸಲು ಭಾಗಿಯಾಗಿರುವ ಹಣಕಾಸು ಅಧಿಕಾರಿಗಳು ಸುಮಾರು 10 ದಿನಗಳ ಕಾಲ ಉತ್ತರ ಬ್ಲಾಕ್ನ ನೆಲಮಾಳಿಗೆಯಲ್ಲೇ ಇರಬೇಕು. ಆ ಸಿಬ್ಬಂದಿ ಎಲ್ಲರೂ ಫೆಬ್ರವರಿ 1 ರಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ವಾರ್ಷಿಕ ಬಜೆಟ್ ಮಂಡಿಸುವವರೆಗೂ ಅಲ್ಲಿಯೇ ಇರುತ್ತಾರೆ.
ಬಜೆಟ್ನಲ್ಲಿರುವ ವಿಷಯಗಳು ಯಾವುದೇ ರೀತಿಯಲ್ಲೂ ಸೋರಿಕೆಯಾಗದಂತೆ ನೋಡಿಕೊಳ್ಳಲು ಈ ಕ್ರಮ ತೆಗೆದುಕೊಳ್ಳಲಾಗಿದೆ. ಹಲ್ವಾ ಸಮಾರಂಭದ ನಂತರ, ಬಜೆಟ್ ದಾಖಲೆಗಳನ್ನು ಮುದ್ರಿಸಲಾಗುತ್ತದೆ.