ಚಿಕ್ಕಬಳ್ಳಾಪುರ : ರಾಜ್ಯದಲ್ಲಿ ಅತಿ ಹೆಚ್ಚು ಟೊಮೇಟೊ ಬೆಳೆಯುವ ಜಿಲ್ಲೆಗಳೆಂಬ ಖ್ಯಾತಿಯಿರುವ ಕೋಲಾರ, ಚಿಕ್ಕಬಳ್ಳಾಪುರ ಎಪಿಎಂಸಿ ಮಾರುಕಟ್ಟೆಯಲ್ಲಿ ಟೊಮೇಟೊಗೆ ಭಾರಿ ಬೇಡಿಕೆ ಸೃಷ್ಟಿಯಾಗಿದೆ.
ಆದರೆ ಬೇಡಿಕೆಗೆ ತಕ್ಕಂತೆ ಫಸಲು ಪೂರೈಕೆಯಿಲ್ಲದ ಕಾರಣ ಕೋಲಾರದಲ್ಲಿ 14 ಕೆಜಿಯ ಒಂದು ಕ್ರೇಟ್ ಬೆಲೆ 1,000-1,300 ರೂ. ತನಕ ಮಾರಾಟವಾಗುವ ಮೂಲಕ ದಾಖಲೆ ಬರೆಯುತ್ತಿದೆ.
ಚಿಕ್ಕಬಳ್ಳಾಪುರ ನಗರದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಗುಣಮಟ್ಟ ಆಧರಿಸಿ 800-1,000 ರೂ.ವರೆಗೆ ಕ್ರೇಟ್ ಟೊಮೇಟೊ ಮಾರಾಟವಾಗುತ್ತಿದೆ. ಅತಿವೃಷ್ಟಿಗೆ ಮುನ್ನ ಹಣ್ಣು ಬೆಳೆದ ರೈತರು ವ್ಯಾಪಾರಕ್ಕಾಗಿ 12 ಗಂಟೆಯವರೆಗೂ ಕಾಯಬೇಕಾಗಿತ್ತು. ಆದರೆ ಈಗ ಬೆಳಗ್ಗೆ 9 ಗಂಟೆಗೆಲ್ಲಾ ವ್ಯಾಪಾರ ಮುಗಿಯುವುದರಿಂದ ರೈತರು ಮತ್ತು ವ್ಯಾಪಾರಿಗಳಿಲ್ಲದೆ ಮಾರುಕಟ್ಟೆ ಪ್ರಾಂಗಣ ಬಿಕೋ ಎನ್ನುವಂತಾಗಿರುವುದು ವಿಚಿತ್ರವಾದರೂ ಸತ್ಯ.
ಪೂರೈಕೆಯೂ ಮಿತಿ ಮೀರಿ ಬರುತ್ತಿದ್ದ ಕಾರಣ ಬೆಲೆಯೇರಿಕೆಯ ಮಾತೇ ಇರಲಿಲ್ಲ. ಚಿಕ್ಕಬಳ್ಳಾಪುರ ಮಾರುಕಟ್ಟೆಗೆ ನಿತ್ಯವೂ 250-300 ಟನ್ ಬರುತ್ತಿದ್ದ ಟೊಮೇಟೊ ಈಗ 15-20 ಟನ್ ಬರುವಂತಾಗಿದೆ. ಇಲ್ಲಿಂದ ಗುಜರಾತ್, ಕೋಲ್ಕೊತಾ, ಉತ್ತರ ಪ್ರದೇಶ, ಆಂಧ್ರ ಪ್ರದೇಶ, ತಮಿಳುನಾಡು ಮೊದಲಾದ ರಾಜ್ಯಗಳಿಗೆ ರಫ್ತಾಗುತ್ತಿತ್ತು. ಬೇಡಿಕೆಗೆ ತಕ್ಕಂತೆ ಪೂರೈಕೆ ಇಲ್ಲದಾಗ ಸಹಜವಾಗಿ ಬೆಲೆ ಏರಿಕೆ ಕಾಣುತ್ತದೆ. ಪೂರೈಕೆಯಿಲ್ಲದ ಕಾರಣ ಸದ್ಯ ಬೆಂಗಳೂರಿನ ಬೇಡಿಕೆಯನ್ನು ನೀಗಿಸಲು ಆಗುತ್ತಿಲ್ಲ ಎನ್ನುವುದು ವ್ಯಾಪಾರಿಗಳ ಹೇಳಿಕೆ.