ಬೆಂಗಳೂರು(ಆ.10): ಸರ್ಕಾರಿ ಕಾರ್ಯಕ್ರಮಗಳಲ್ಲಿ ಸಾಮಾನ್ಯವಾಗಿ ಅನಗತ್ಯ ಖರ್ಚು ಹೆಚ್ಚಾಗಿ ನಡೆಯುತ್ತದೆ. ಅದೆಷ್ಟೇ ಸರಳ ಕಾರ್ಯಕ್ರಮವಾದರೂ ಹೂವು, ಹಣ್ಣು ಹಂಪಲು, ತುರಾಯಿ ಎಂದು ಹಣ ವ್ಯಯಿಸಲಾಗುತ್ತದೆ. ಆದರೀಗ ಈ ವಿಧಿ ವಿಧಾನಗಳಿಗೆ ಬ್ರೇಕ್ ಹಾಕಿರುವ ಕರ್ನಾಟಕ ಸಿಎಂ ಬೊಮ್ಮಾಯಿ ಎಲ್ಲಾ ಖರ್ಚುಗಳಿಗೆ ತಡೆ ಹಾಕಿದ್ದಾರೆ.
ಹೌದು ಮುಖ್ಯಮಂತ್ರಿಗಳ ಕಚೇರಿಯಿಂದ ಈ ಬಗ್ಗೆ ಪ್ರಕಟನೆಯೊಂದನ್ನು ಹೊರಡಿಸಲಾಗಿದ್ದು, ಇದರಲ್ಲಿ ರಾಜ್ಯ ಸರ್ಕಾರ ಮತ್ತು ಸರ್ಕಾರದ ಸ್ವಾಮ್ಯಕ್ಕೊಳಪಡುವ ಸಂಸ್ಥೆಗಳು ನಡೆಸುವ ಸಭೆ ಮತ್ತು ಸಮಾರಂಭಗಳಲ್ಲಿ ಹೂಗುಚ್ಛ, ಹಾರ, ತುರಾಯಿ, ಹಣ್ಣಿನ ಬುಟ್ಟಿ, ಶಾಲು, ನೆನಪಿನ ಕಾಣಿಕೆ ಇತ್ಯಾದಿ ಯಾವುದೇ ರೀತಿಯ ಕಾಣಿಕೆಗಳನ್ನು ನೀಡಬಾರದೆಂದು ಈ ಮೂಲಕ ನಿರ್ದೇಶಿಸಿದೆ. ಬದಲಾಗಿ ಕನ್ನಡ ಪುಸ್ತಕಗಳನ್ನು ನೀಡಬಹುದು ಎಂದು ಹೇಳಲಾಗಿದೆ.
ಅಲ್ಲದೇ ಈ ನಿರ್ದೇಶನವನ್ನು ಚಾಚೂ ತಪ್ಪದೇ ಅನುಷ್ಟಾನಗೊಳಿಸಲು ಸಂಬಂಧಪಟ್ಟ ಸರ್ಕಾರದ ಎಲ್ಲಾ ಇಲಾಖೆಗಳು ಮತ್ತು ರಾಜ್ಯ ಸರ್ಕಾರದ ಸ್ವಾಮ್ಯಕ್ಕೊಳಪಡುವ ಎಲ್ಲಾ ಸಂಸ್ಥೆಗಳು ತಮ್ಮ ಅಧೀನದಲ್ಲಿ ಬರುವ ಎಲ್ಲಾ ಅಧಿಕಾರಿಗಳಿಗೆ ಸೂಚಿಸುವಂತೆ ತಿಳಿಸಿದೆ ಎಂದೂ ಇಲ್ಲಿ ಉಲ್ಲೇಖಿಸಲಾಗಿದೆ.
ಬಸವರಾಜ ಬೊಮ್ಮಾಯಿ ಕರ್ನಾಟಕ ಸಿಎಂ ಆಗಿ ಅಧಿಕಾರ ಸ್ವೀಕರಿಸಿದಾಗಿನಿಂದ ಅನೇಕ ಮಹತ್ವದ ಕ್ರಮಗಳನ್ನು ಕೈಗೊಂಡಿದ್ದು, ಸದ್ಯ ಸರ್ಕಾರಿ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ತೆಗೆದುಕೊಂಡ ಈ ನಿರ್ಧಾರ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.