ಬೆಂಗಳೂರು : ಸುಮಾರು ಎರಡು ವರ್ಷಗಳ ನಂತರ ಕರ್ನಾಟದಲ್ಲಿ 1ರಿಂದ 5ನೇ ತರಗತಿವರೆಗಿನ ಶಾಲೆಗಳು ಮತ್ತೆ ಆರಂಭವಾಗುತ್ತಿದ್ದು, ಶಾಲೆಗೆ ಹೊರಡುವ ಸಂಭ್ರಮ ಮಕ್ಕಳಿರುವ ಮನೆಗಳಲ್ಲಿ ಮನೆಮಾಡಿದೆ.
ಹಲವು ಮನೆಗಳಲ್ಲಿ ನಿನ್ನೆಯಿಂದಲೇ ಸಿದ್ಧತೆಗಳು ಆರಂಭವಾಗಿದ್ದು, ಮಕ್ಕಳಿಗೂ ಲಸಿಕೆ ಹಾಕಿಸಿದ ನಂತರವೇ ಶಾಲೆ ಆರಂಭಿಸಿದ್ದರೆ ಒಳ್ಳೆಯದಿತ್ತು ಎಂದು ಕೆಲ ಪೋಷಕರು ಬಲವಾಗಿ ಪ್ರತಿಪಾದಿಸಿದರು. ಮನೆಯಲ್ಲಿ ನಾವು ಎಷ್ಟು ಹೇಳಿದರೂ ಮಕ್ಕಳು ಕೇಳುವುದಿಲ್ಲ. ಮಗ್ಗಿ ಕೂಡ ಮರೆತಿದ್ದಾರೆ ಶಾಲೆ ಆರಂಭವಾಗಿದ್ದು ಒಳ್ಳೆಯದಾಯ್ತು ಎಂದು ಹಲವು ಪೋಷಕರು ಶಾಲೆ ಆರಂಭಿಸುವ ತೀರ್ಮಾನವನ್ನು ಬೆಂಬಲಿಸಿದ್ದರು.
ಮಾರ್ಗಸೂಚಿ ವಿವರ
ರಾಜ್ಯದಲ್ಲಿ 1ರಿಂದ 5ನೇ ತರಗತಿಗಳನ್ನು ಆರಂಭಿಸಲು ತೀರ್ಮಾನಿಸಿರುವ ಸರ್ಕಾರ ಮಾರ್ಗಸೂಚಿಯನ್ನೂ ಪ್ರಕಟಿಸಿದೆ. 20 ತಿಂಗಳ ನಂತರ ರಾಜ್ಯದಲ್ಲಿ ಕಿರಿಯ ಪ್ರಾಥಮಿಕ ಶಾಲೆಗಳು ಆರಂಭವಾಗುತ್ತಿದ್ದು, 3ನೇ ಹಂತದಲ್ಲಿ 1ರಿಂದ 5ನೇ ತರಗತಿ ಮಕ್ಕಳು ಶಾಲೆಗೆ ಬರುತ್ತಿದ್ದಾರೆ. ಅಕ್ಟೋಬರ್ 30ರವರೆಗೆ ಅರ್ಧದಿನ ಮಾತ್ರ ತರಗತಿ ನಡೆಯಲಿದೆ. ಪ್ರತಿದಿನ ಬೆಳಗ್ಗೆ 10ರಿಂದ ಮಧ್ಯಾಹ್ನ 1.30ರವರೆಗೆ, ಶನಿವಾರ ಬೆಳಗ್ಗೆ 8ರಿಂದ 11.40ರವರೆಗೆ ತರಗತಿ ನಡೆಸಬೇಕು ಎಂದು ಸರ್ಕಾರ ಸೂಚಿಸಿದ್ದು, ನವೆಂಬರ್ 2ರಿಂದ ಪೂರ್ಣಾವಧಿ ತರಗತಿಗಳು ಅಂದರೆ, ಬೆಳಗ್ಗೆ 10ರಿಂದ ಸಂಜೆ 4.30ರವರೆಗೂ ತರಗತಿಗಳು ನಡೆಯಲಿವೆ.
ಮಕ್ಕಳು ಶಾಲೆಗೆ ಬರಲು ಪೋಷಕರ ಒಪ್ಪಿಗೆ ಕಡ್ಡಾಯ. ಅ.30ರವರೆಗೆ ಮಧ್ಯಾಹ್ನದ ಬಿಸಿಯೂಟ ಇರುವುದಿಲ್ಲ. ನ.2ರಿಂದ ಶಾಲೆಗಳಲ್ಲಿ ಮಧ್ಯಾಹ್ನ ಬಿಸಿಯೂಟ ವ್ಯವಸ್ಥೆ ಮಾಡಲಾಗುವುದು. ಅನುದಾನ ರಹಿತ ಶಾಲೆಗಳಲ್ಲಿ ಮಕ್ಕಳೇ ಊಟ ತರಬೇಕು. ಶಾಲೆಗಳಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು. ಒಂದು ಕೊಠಡಿಯಲ್ಲಿ 15-20 ಮಕ್ಕಳ ತಂಡ ರಚಿಸಿ ಪಾಠ. ಶಾಲೆ ಗೇಟ್ ಬಳಿ ಮಕ್ಕಳಿಗೆ ಥರ್ಮಲ್ ಸ್ಕ್ರೀನಿಂಗ್ ವ್ಯವಸ್ಥೆ ಕಡ್ಡಾಯ. ಯಾವುದೇ ಮಕ್ಕಳಲ್ಲಿ ಕೊರೊನಾ ಕಂಡುಬಂದರೆ ಶಾಲೆಯನ್ನು ಸ್ಯಾನಿಟೈಸ್ ಮಾಡಬೇಕು. ಮುಂದಿನ ಆದೇಶದವರೆಗೆ ಎಲ್ಕೆಜಿ, ಯುಕೆಜಿ ಆರಂಭಿಸುವಂತಿಲ್ಲ. ಶಿಕ್ಷಕರು, ವಿದ್ಯಾರ್ಥಿಗಳು ಮಾಸ್ಕ್ ಧರಿಸುವುದು ಕಡ್ಡಾಯ. ಶಿಕ್ಷಕರು 2 ಡೋಸ್ ಲಸಿಕೆ ಪಡೆದಿರುವುದು ಕಡ್ಡಾಯ. 50 ವರ್ಷ ಮೇಲ್ಪಟ್ಟ ಶಿಕ್ಷಕರು ಫೇಸ್ಶೀಲ್ಡ್ ಧರಿಸಬೇಕು ಎಂದು ಸರ್ಕಾರ ಆದೇಶಿಸಿದೆ.