ಬೆಂಗಳೂರು : ರಸ್ತೆ ಗುಂಡಿ ವಿಚಾರದಲ್ಲಿ ಬಿಬಿಎಂಪಿಯನ್ನು ಹೈಕೋರ್ಟ್ ಮತ್ತೊಮ್ಮೆ ತರಾಟೆಗೆ ತೆಗೆದುಕೊಂಡಿದೆ.
ಮುಂದಿನ 15 ದಿನಗಳಲ್ಲಿ ಬೆಂಗಳೂರಿನ ಸಿಬಿಡಿ ಏರಿಯಾದ ಎಲ್ಲಾ ರಸ್ತೆಗಳ ಗುಂಡಿ ಮುಚ್ಚುವಂತೆ ಬಿಬಿಎಂಪಿಗೆ ಡೆಡ್ಲೈನ್ ನೀಡಿದೆ.
ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಸಿಜೆ ನೇತೃತ್ವದ ಹೈಕೋರ್ಟ್ ವಿಭಾಗೀಯ ಪೀಠ, ಎಂಎಸ್ ಪಾಳ್ಯದಲ್ಲಿ ರಸ್ತೆ ಗುಂಡಿಗೆ ಬಲಿಯಾದ ಅಶ್ವಿನ್ ಪ್ರಕರಣವನ್ನು ಪ್ರಸ್ತಾಪಿಸಿತು.
ರಸ್ತೆಗುಂಡಿಯಿಂದ ಆಗುವ ಪ್ರತಿಯೊಂದು ಸಾವು ನಮ್ಮಲ್ಲಿ ಅಪರಾಧಿ ಪ್ರಜ್ಞೆ ಮೂಡಿಸುತ್ತಿದೆ ಎಂದು ಬೇಸರ ಹೊರಹಾಕಿತು.
ಬಿಬಿಎಂಪಿಯ ಗುಂಡಿ ಮುಚ್ಚುವ ನಿಮ್ಮ ಕಾರ್ಯ ಯೋಜನೆ ಸಮಾಧಾನ ತಂದಿಲ್ಲ. ಮೂರು ದಿನಗಳಲ್ಲಿ ಗುಂಡಿಗಳ ಸರ್ವೇ ಮುಗಿಸಿ, 15 ದಿನಗಳಲ್ಲಿ ಗುಂಡಿ ಮುಚ್ಚುವ ಕೆಲಸ ಯುದ್ಧೋಪಾದಿಯಲ್ಲಿ ನಡೆಸಿ ಎಂದು ಬಿಬಿಎಂಪಿ ಮುಖ್ಯ ಆಯುಕ್ತರು, ಮುಖ್ಯ ಎಂಜಿನಿಯರ್ಗೆ ಸೂಚಿಸಿತು.