ಶಾಲೆ-ಕಾಲೇಜುಗಳಲ್ಲಿ ಸಮವಸ್ತ್ರ ನಿಯಮದ ಕುರಿತು ಕರ್ನಾಟಕ ಹೈಕೋರ್ಟ್‌ನ ತೀರ್ಪು ಐತಿಹಾಸಿಕ. ಈ ತೀರ್ಪನ್ನು ಸ್ವಾಗತಿಸುತ್ತೇನೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ ಸಚಿವರು ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಬಿ. ಸಿ. ನಾಗೇಶ್ ಅವರು ಹೇಳಿದರು.
ದಿಲ್ಲಿ ಪ್ರವಾಸದಲ್ಲಿರುವ ಸಚಿವರು, ಹೈಕೋರ್ಟ್ ತೀರ್ಪಿನ ಕುರಿತು ಸುದ್ದಿಗಾರರ ಜೊತೆ ಮಂಗಳವಾರ ಮಾತನಾಡಿದರು.
ಕಾನೂನಿನ ಚೌಕಟ್ಟಿನಲ್ಲೇ ಸಮವಸ್ತ್ರದ ಕುರಿತು ರಾಜ್ಯ ಸರಕಾರ ಆದೇಶ ಹೊರಡಿಸಿತ್ತು. ಸರ್ಕಾರದ ಆದೇಶ ಸರಿ ಇದೆ ಎಂದು ರಾಜ್ಯ ಹೈಕೋರ್ಟ್ ಹೇಳಿದೆ. ಈ ತೀರ್ಪನ್ನು ಎಲ್ಲರೂ ಗೌರವಿಸಬೇಕು ಎಂದು ಸಚಿವರು ಹೇಳಿದರು.
ಕರ್ನಾಟಕ ಶಿಕ್ಷಣ ಕಾಯ್ದೆ ಅನುಸಾರ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ವ್ಯಾಪ್ತಿಗೆ ಒಳಪಡುವ ರಾಜ್ಯದ ಶಾಲೆ-ಕಾಲೇಜುಗಳಲ್ಲಿ ಸಮವಸ್ತ್ರ ನಿಯಮ ಜಾರಿಯಲ್ಲಿದೆ. ದಶಕಗಳಿಂದ ಈ ನಿಯಮವನ್ನು ಪಾಲಿಸಲಾಗುತ್ತಿದೆ. ಆದರೆ, ಮುಸ್ಲಿಂ ಮಹಿಳೆಯರ ಏಳಿಗೆ, ಸಬಲೀಕರಣ ಸಹಿಸದ ಕೆಲವು ಸಂಘಟನೆಗಳು, ವ್ಯಕ್ತಿಗಳು ಉಡುಪಿ ಕಾಲೇಜಿನ ಕೆಲ ವಿದ್ಯಾರ್ಥಿನಿಯರ ದಾರಿ ತಪ್ಪಿಸಿದ್ದರು. ಹೀಗಾಗಿ, ರಾಜ್ಯದಲ್ಲಿ ಅನಗತ್ಯ ವಿವಾದ ಸೃಷ್ಟಿಯಾಗಿತ್ತು. ವಿದ್ಯಾರ್ಥಿನಿಯರು ಹೈಕೋರ್ಟ್ ಮೆಟ್ಟಿಲೇರುವಂತಹ ವಾತಾವರಣವನ್ನು ಸೃಷ್ಟಿಸಿದ್ದರು. ಸರ್ಕಾರದ ಆದೇಶದ ಕುರಿತು ಅಡ್ವೋಕೆಟ್ ಜನರಲ್ ಹಾಗೂ ಅರ್ಜಿದಾರರ ಪರ ವಕೀಲರ ವಾದವನ್ನು ಸವಿವರವಾಗಿ ಆಲಿಸಿದ ಹೈಕೋರ್ಟ್, ಐತಿಹಾಸಿಕ ತೀರ್ಪು ನೀಡಿದೆ ಎಂದು ಸಚಿವರು ಹೇಳಿದರು.
ಭಾರತದ ಸಂವಿಧಾನ, ಕರ್ನಾಟಕ ಶಿಕ್ಷಣ ಕಾಯ್ದೆ, ಮಹಿಳೆಯರ ಹಕ್ಕುಗಳು, ದೇಶದ ವಿವಿಧ ನ್ಯಾಯಾಲಯಗಳ ಆದೇಶಗಳು ಮತ್ತು ತೀರ್ಪುಗಳ ಕುರಿತು ಕರ್ನಾಟಕ ಹೈಕೋರ್ಟ್ ಪರಾಮರ್ಶೆ ನಡೆಸಿದ್ದು, ತೀರ್ಪಿನಲ್ಲಿ ಉಲ್ಲೇಖಿಸಲಾಗಿದೆ. ಎಲ್ಲ ಸಮುದಾಯ, ವರ್ಗದ ಮಹಿಳೆಯರ ಶಿಕ್ಷಣ, ಸಬಲೀಕರಣ ಪರವಾಗಿ ರಾಜ್ಯ ಬಿಜೆಪಿ ಸರ್ಕಾರ ಸದಾ ಇರುತ್ತದೆ ಎಂದು ಸಚಿವ ನಾಗೇಶ್ ನುಡಿದರು.
ಸಮವಸ್ತ್ರವು ಮಕ್ಕಳಲ್ಲಿ ಸಮಾನತೆ, ಭಾವೈಕ್ಯತೆ ಭಾವನೆ ಮೂಡಿಸಿ ತಾರತಮ್ಯವನ್ನು ನಿವಾರಿಸಿ ನಾವೆಲ್ಲ ಒಂದು ಎಂಬ ಭಾವನೆ ಮೂಡಿಸುತ್ತದೆ. ಹೀಗಾಗಿ, ತರಗತಿಗಳಲ್ಲಿ ವಿದ್ಯಾರ್ಥಿಗಳು ಸಮವಸ್ತ್ರ ನಿಯಮ ಪಾಲಿಸಬೇಕು ಎಂದು ಸಚಿವ ನಾಗೇಶ್ ಹೇಳಿದರು.
ಶಿಕ್ಷಣದಿಂದ ಸಮಾಜ, ದೇಶದ ಅಭಿವೃದ್ಧಿ ಸಾಧ್ಯ. ಆದರೆ, ಕಳೆದ ಎರಡು ವರ್ಷಗಳಿಂದ ಕೋವಿಡ್ ಕಾರಣದಿಂದ ಮಕ್ಕಳ ಶಿಕ್ಷಣಕ್ಕೆ ಹಿನ್ನಡೆಯಾಗಿದೆ. ಈ ನಡುವೆ ಅನಗತ್ಯವಾಗಿ ಎಬ್ಬಿಸಿದ ವಿವಾದದಿಂದ ಮಕ್ಕಳ ಶಿಕ್ಷಣಕ್ಕೆ ತೊಂದರೆಯಾಗುತ್ತಿತ್ತು. ಆದರೆ, ರಾಜ್ಯ ಹೈಕೋರ್ಟ್ ಎಲ್ಲ ಗೊಂದಲಗಳಿಗೆ ತೆರೆ ಎಳೆದಿದೆ. ಪರೀಕ್ಷೆಗಳು ಹತ್ತಿರ ಇರುವ ಕಾರಣ ಮಕ್ಕಳು ಓದು, ಬರಹದ ಕಡೆ ಗಮನ ಹರಿಸಬೇಕು. ಪರೀಕ್ಷೆಗೆ ಸಿದ್ಧರಾಗಬೇಕು ಎಂದು ಸಚಿವರು ನುಡಿದರು.
ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆಗೆ ಧಕ್ಕೆ ತರುವ ಕಿಡಿಗೇಡಿಗಳು, ಸಂಘ-ಸಂಸ್ಥೆಗಳ ಮಾತುಗಳಿಗೆ ವಿದ್ಯಾರ್ಥಿಗಳಾಗಲಿ, ಪಾಲಕರಾಗಲಿ ಕಿವಿಗೊಡಬಾರದು. ಶೈಕ್ಷಣಿಕ ಏಳಿಗೆ ಮತ್ತು ಅಭಿವೃದ್ಧಿಯ ಕಡೆ ಗಮನ ಹರಿಸಬೇಕು ಎಂದು ಸಚಿವರು ಹೇಳಿದರು.
ಸಮವಸ್ತ್ರ ನಿಯಮದ ವಿರುದ್ಧ ನ್ಯಾಯಾಲಯದ ಮೊರೆ ಹೋಗಿದ್ದ ಉಡುಪಿ ವಿದ್ಯಾರ್ಥಿನಿಯರ ಮನವೋಲಿಸಿ ತರಗತಿಗೆ ಹಾಜರಾಗುವಂತೆ ಮನವಿ ಮಾಡುತ್ತೇವೆ. ಯಾರೊಬ್ಬರು ಕೂಡ ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಉದ್ದೇಶವನ್ನು ರಾಜ್ಯ ಸರ್ಕಾರ ಹೊಂದಿದೆ ಎಂದು ಸಚಿವರು ನುಡಿದರು.